ಪ್ರಭಾರ ಡಿಜಿಪಿಯಾಗಿ ಎಂ.ಎ. ಸಲೀಂ ನೇಮಕ

M.A. Salim appointed as acting DGP

ಬೆಂಗಳೂರು 21: ಹಿರಿಯ ಐಪಿಎಸ್ ಅಧಿಕಾರಿ ಎಂ.ಎ. ಸಲೀಂ ಅವರನ್ನು ರಾಜ್ಯದ ಪ್ರಭಾರ ಪೊಲೀಸ್ ಮಹಾನಿರ್ದೇಶಕರನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಬುಧವಾರ ಆದೇಶಿಸಿದೆ.

ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿದ್ದ ಅಲೋಕ್ ಮೋಹನ್ ಅವರು ಏ. 30ರಂದು ನಿವೃತ್ತಿಯಾದರು. ಆದರೆ ಮೇ 21ರವರೆಗೆ ಅವರ ಕರ್ತವ್ಯ ಅವಧಿಯನ್ನು ರಾಜ್ಯ ಸರ್ಕಾರ ವಿಸ್ತರಿಸಿತ್ತು.

ಬೆಂಗಳೂರಿನ ಚಿಕ್ಕಬಾಣಾವರದ ಕನ್ನಡಿಗ ಎಂ.ಎ. ಸಲೀಂ ಅವರು 1993ನೇ ಸಾಲಿನ ಕರ್ನಾಟಕ ಕೇಡರ್ ಅಧಿಕಾರಿಯಾಗಿದ್ದಾರೆ.

2023ರ ಮೇ 22ರಂದು ಅಲೋಕ್ ಮೋಹನ್ ಅಧಿಕಾರ ಸ್ವೀಕರಿಸಿದ್ದರು. ಆರಂಭದ ಮೂರು ತಿಂಗಳು ಪ್ರಭಾರ ಡಿಜಿಪಿಯಾಗಿದ್ದ ಅವರನ್ನು, ಬಳಿಕ  ಪೂರ್ಣ ಪ್ರಮಾಣದ ಡಿಜಿಪಿಯಾಗಿ ಸರ್ಕಾರ ನೇಮಿಸಿತ್ತು

ಪ್ರಸ್ತುತ ಸೇವಾ ಹಿರಿತನದಲ್ಲಿ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್‌, ಸಿಐಡಿ ಡಿಜಿಪಿ ಡಾ.ಎ.ಎಂ.ಸಲೀಂ ಮತ್ತು ಕೆ.ರಾಮಚಂದ್ರ ರಾವ್ ಹೆಸರು ಪಟ್ಟಿಯಲ್ಲಿದೆ. ಇದರಲ್ಲಿ ರನ್ಯಾ ರಾವ್ ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ರಾಮಚಂದ್ರ ರಾವ್‌ಗೆ ಸರ್ಕಾರ ಕಡ್ಡಾಯ ರಜೆ ಮೇಲೆ ಕಳುಹಿಸಿದೆ. ಆದ್ದರಿಂದ ಪ್ರಶಾಂತ್ ಕುಮಾರ್ ಠಾಕೂರ್ ಹಾಗೂ ಸಲೀಂ ಹೆಸರು ಮುಂಚೂಣಿಯಲ್ಲಿವೆ.

ಬಿಹಾರ ರಾಜ್ಯದವರಾದ ಪ್ರಶಾಂತ್‌ ಕುಮಾರ್ ಠಾಕೂರ್, 1992ನೇ ಸಾಲಿನ ಕರ್ನಾಟಕ ಕೇಡರ್‌ ಅಧಿಕಾರಿ. ರಾಜ್ಯದಲ್ಲಿ ಡಿಜಿ-ಐಜಿಪಿಯ ಕನಿಷ್ಠ ಅಧಿಕಾರದ ಅವಧಿ ಎರಡು ವರ್ಷ ಇರಬೇಕು ಎಂದು ಸುಪ್ರೀಂ ಕೋರ್ಟ್ ಆದೇಶವಿದೆ. ಪ್ರಶಾಂತ್ ಕುಮಾರ್ ಠಾಕೂರ್ ಅವರು ಸಲೀಂ ಅವರಿಗಿಂತ ಒಂದು ವರ್ಷ ಸೇವಾ ಹಿರಿತನ ಹೊಂದಿದ್ದಾರೆ.