ಏಕಾಏಕಿ ಬಿರುಗಾಳಿ: ಗ್ರಾಮದಲ್ಲಿ ಮನೆಗಳಿಗೆ ಭಾರೀ ಹಾನಿ
ಲೋಕದರ್ಶನ ವರದಿ
ಮುಂಡಗೋಡ 26 : ತಾಲೂಕಿನ ಮೈನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳಿಬೆಳಕು ಗ್ರಾಮದಲ್ಲಿ ಶನಿವಾರ ಸಂಜೆ ಬೀಸಿದ ಭಾರೀ ಗಾಳಿ ಅಬ್ಬರಕ್ಕೆ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಬಿರುಗಾಳಿಯ ತೀವ್ರತೆಗೆ ಮನೆಗಳ ಮೇಲ್ಛಾವಣಿಗಳು ಹಾರಿಹೋಗಿ, ಮರಗಳು ಮನೆಗಳ ಮೇಲೆ ಉರುಳಿಬಿದ್ದು ಭಾರೀ ಹಾನಿ ಉಂಟಾಗಿದೆ. ಪ್ರಕಾಶ್ ಅತೋನಿ ಸಿದ್ದಿ ಅವರ ಮನೆಯ ಮೇಲೆ ದೊಡ್ಡ ನಂದಿ ಮರ ಬಿದ್ದು, ಮನೆಯ ಮೇಲ್ಛಾವಣಿ ಸಂಪೂರ್ಣವಾಗಿ ಕುಸಿದುಹೋಗಿದೆ. ಮನೆಯೊಳಗಿನ ಸಾಮಗ್ರಿಗಳು ಹಾನಿಗೊಳಗಾಗಿದ್ದು, ಗೋಡೆಗಳಿಗೂ ಹಾನಿ ಉಂಟಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮನೆ ಮೇಲ್ಛಾವಣಿಯ ಟೈಲುಗಳು ಚದುರಿಹೋಗಿ ಅವಶೇಷಗಳ ರಾಶಿ ಕಾಣಿಸಿಕೊಂಡಿದೆ. ಗಾಳಿಯ ತೀವ್ರತೆಗೆ ಸುತ್ತಮುತ್ತಲಿನ ಪರಿಸರವೇ ಅಸ್ತವ್ಯಸ್ತಗೊಂಡಿದೆ. ಈ ಪ್ರಕೃತಿ ವಿಕೋಪದಿಂದ ಸುಮಾರು ಮನೆ ಮಾಲೀಕನಿಗೆ ?50,000 ಕ್ಕೂ ಹೆಚ್ಚು ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಸ್ಥಳೀಯರು ತಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಪರಿಹಾರ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿ, ಶೀಘ್ರ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.