ಮಲಗಿದ್ದ ಮಕ್ಕಳಿಗೆ ಹಾವು ಕಡಿತ: ಬಾಲಕ ಸಾವು
ಕಾರವಾರ 24: ಮನೆಯಲ್ಲಿ ಮಲಗಿದ್ದ ಮಕ್ಕಳಿಗೆ ಬೆಳಗಿನ ಜಾವ ಹಾವು ಕಚ್ಚಿದ ದುರ್ಘಟನೆ ತಾಲೂಕಿನ ಬನವಾಸಿ ಸನಿಹದ ಸಹಸ್ರಳ್ಳಿ ಗ್ರಾಮದಲ್ಲಿ ಬುಧವಾರ ಮುಂಜಾನೆ ನಡೆದಿದೆ. ಹಾವು ಕಚ್ಚಿದ ಪರಿಣಾಮ ಬಾಲಕ ಸಾವನ್ನಪ್ಪಿದ್ದು, ಆತನ ತಂಗಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾಳೆ. ಬಾಲಕ ಮಿಥುನ್ ಆರನೇ ತರಗತಿಯಲ್ಲಿ ಓದುತ್ತಿದ್ದ. ಮಿಥುನ್ ಪುಟ್ಟಪ್ಪ ನಾಯ್ಕ (12) ಮೃತಪಟ್ಟಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.
ಹಾವಿನ ಕಡಿತಕ್ಕೊಳಗಾದ ಆತನ ಸಹೋದರಿ ದೀಕ್ಷಾ ಪುಟ್ಟಪ್ಪ ನಾಯ್ಕ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ಮಿಥುನ್ ಮತ್ತು ದೀಕ್ಷಾ ಮಂಗಳವಾರ ರಾತ್ರಿ ಊಟ ಮುಗಿಸಿ , ಮನೆಯಲ್ಲೇ ಮಲಗಿದ್ದರು. ಮುಂಜಾನೆ ವೇಳೆ ಇಬ್ಬರೂ ಏಕಾಏಕಿ ಎದ್ದು ವಾಂತಿ ಮಾಡತೊಡಗಿದ್ದಾರೆ . ಪಾಲಕರು, ಮಕ್ಕಳ ಸ್ಥಿತಿ ಕಂಡು ಆಸ್ಪತ್ರೆಗೆ ಕರೆದೊಯ್ದರು. ಇದೇ ವೇಳೆ ಮನೆಯೊಳಗಿಂದ ಹಾವೊಂದು ಹೊರಗೆ ಹೋಗಿದ್ದನ್ನು ಗಮನಿಸಿದ್ದಾರೆ.
ಬನವಾಸಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಪ್ರಾಥಮಿಕ ಚಿಕಿತ್ಸೆ ನೀಡಿದ, ನಂತರ ಹೆಚ್ಚಿನ ಚಿಕಿತ್ಸೆಗೆ ಶಿರಸಿಯ ಮಹಾಲಕ್ಷ್ಮೀ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಮಿಥುನ್ ಚಿಕಿತ್ಸೆ ಫಲಕಾರಿಯಾಗದೆ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾನೆ. ದೀಕ್ಷಾ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾಳೆವೈದ್ಯರ ಪ್ರಾಥಮಿಕ ಪರೀಶೀಲನೆಯಲ್ಲಿ ಮಿಥುನ್ನ ಕಿವಿಗೆ ಹಾಗೂ ದೀಕ್ಷಾಳ ಕೈ ಬೆರಳಿಗೆ ವಿಷಪೂರಿತ ಹಾವು ಕಚ್ಚಿರುವುದು ದೃಢಪಟ್ಟಿದೆ ಎಂದು ತಿಳಿದುಬಂದಿದೆ.ಘಟನೆ ಕುರಿತು ಮಾಹಿತಿ ಪಡೆದ ಬನವಾಸಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ಮಾಡಿ, ಪ್ರಕರಣ ದಾಖಲಿಸಿದ್ದಾರೆ.