ಛತ್ರ ಗ್ರಾಮದಲ್ಲಿ ಅದ್ದೂರಿಯಾಗಿ ಶಾಲಾ ಪ್ರಾರಂಭೋತ್ಸವ

ಛತ್ರ ಗ್ರಾಮದಲ್ಲಿ ಅದ್ದೂರಿಯಾಗಿ ಶಾಲಾ ಪ್ರಾರಂಭೋತ್ಸವ  School commencement ceremony held in Chhatra village

ಬ್ಯಾಡಗಿ 03 : ತಾಲೂಕಿನ ಛತ್ರ ಗ್ರಾಮದಲ್ಲಿ ಹೊಸ ಶೈಕ್ಷಣಿಕ ವರ್ಷದ ಆರಂಭವನ್ನು ಸ್ಮರಣೀಯವಾಗಿಸುವ ಉದ್ದೇಶದಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾರಂಭೋತ್ಸವ ಕಾರ್ಯಕ್ರಮ ಅತ್ಯಂತ ಅದ್ದೂರಿಯಾಗಿ ಹಾಗೂ ಸಂಭ್ರಮದಿಂದ ಜರುಗಿತು. ಶಾಲೆಯ ಮೊದಲ ದಿನವೇ ಮಕ್ಕಳಲ್ಲಿ ಕಲಿಕೆಯ ಬಗ್ಗೆ ಆಸಕ್ತಿ ಮತ್ತು ಉತ್ಸಾಹ ಮೂಡಿಸುವ ಉದ್ದೇಶದಿಂದ ವಿವಿಧ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳ ಭವ್ಯ ಮೆರವಣಿಗೆ ನಡೆಸಿಶಾಲೆಯ ಮುಖ್ಯ ದ್ವಾರದಲ್ಲಿ ಅತಿಥಿಗಳು ಹಾಗೂ ಶಿಕ್ಷಕರು ಸೇರಿ ಮಕ್ಕಳ ಮೇಲೆ ಪುಷ್ಪವೃಷ್ಟಿ ಮಾಡುವ ಮೂಲಕ ಶಾಲೆಗೆ ಆತ್ಮೀಯವಾಗಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಎಸ್ ಡಿಎಂಸಿ ಅಧ್ಯಕ್ಷೆ ಚೈತ್ರಾ ಅಂಗರಗಟ್ಟಿ  ಮಾತನಾಡಿ ಶಿಕ್ಷಣವು ಪ್ರತಿಯೊಬ್ಬ ಮಗುವಿನ ಮೂಲಭೂತ ಹಕ್ಕಾಗಿದ್ದು, ಸರ್ಕಾರ ಮತ್ತು ಸಂವಿಧಾನದ ಆಶಯವೂ ಎಲ್ಲ ಮಕ್ಕಳಿಗೆ ಗುಣಮಟ್ಟದ ಹಾಗೂ ಸಮಾನ ಶಿಕ್ಷಣ ಒದಗಿಸುವುದಾಗಿದೆ ಎಂದು ಹೇಳಿದರು.

ಪ್ರಧಾನ ಶಿಕ್ಷಕಿ ಜಿ.ಸಿ.ಬೇತುರಮಠ ಮಾತನಾಡಿ ಪ್ರತಿ ಶೈಕ್ಷಣಿಕ ವರ್ಷದ ಚಟುವಟಿಕೆಗಳನ್ನು ಪೂರ್ವಯೋಜಿತವಾಗಿ ರೂಪಿಸಿ ಅನುಷ್ಠಾನಗೊಳಿಸುವುದೇ ಶಾಲಾರಂಭೋತ್ಸವದ ಪ್ರಮುಖ ಉದ್ದೇಶವಾಗಿದೆ. ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು, ಸರ್ಕಾರಿ ಶಾಲೆಗಳು ಇಂದು ಯಾವುದೇ ಖಾಸಗಿ ಶಾಲೆಗಳಿಗಿಂತ ಕಡಿಮೆ ಇಲ್ಲ ಎಂಬುದನ್ನು ಸಮಾಜ ಅರಿಯಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಎಸ್ಡಿಎಂಸಿ ಉಪಾಧ್ಯಕ್ಷ  ಸುರೇಶ ಹಂಚಿನಮನಿ, ರಾಜೀವ ರಡ್ಡಿ, ಎ.ಎಂ.ಸೌದಾಗಾರ, ಜಿ.ಎಲ್‌.ರಾಠೋಡ, ಕೆ.ವಿ.ಬಳಿಗಾರ, ಕೆ.ವಿ.ಬಳ್ಳಾರಿ, ಎಂ.ಸಿ.ಹಾಲಮ್ಮ ಸೇರಿದಂತೆ ಎಸ್ಡಿಎಂಸಿ ಸದಸ್ಯರು ಗ್ರಾಮಸ್ಥರು ಇದ್ದರು.