ಮೂಲಸೌಕರ್ಯಗಳ ಬೇಡಿಕೆಗೆ ಎಸ್‌ಎಫ್‌ಐ ಧ್ವನಿ

ಮೂಲಸೌಕರ್ಯಗಳ ಬೇಡಿಕೆಗೆ ಎಸ್‌ಎಫ್‌ಐ ಧ್ವನಿ  SFI voices demand for infrastructure

ಹಾವೇರಿ 14: ಹಾವೇರಿ ವಿಶ್ವವಿದ್ಯಾಲಯದ ಸಮಗ್ರ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಮೂಲಭೂತ ಸೌಲಭ್ಯಗಳ ಬೇಡಿಕೆಗಳ ಪರಿಹಾರಕ್ಕಾಗಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಜಿಲ್ಲಾ ಘಟಕದ ಪ್ರಥಮ ಸಮ್ಮೇಳನದ ಲೋಗೋವನ್ನು ವಿಶ್ವವಿದ್ಯಾಲಯ ಕ್ಯಾಂಪಸ್ನಲ್ಲಿ ಬಿಡುಗಡೆ ಮಾಡಲಾಯಿತು.  

ಈ ಸಂದರ್ಭದಲ್ಲಿ ಎಸ್‌ಎಫ್‌ಐ ಜಿಲ್ಲಾ ಅಧ್ಯಕ್ಷ ಬಸವರಾಜ ಎಸ್‌. ಮಾತನಾಡಿ, ವಿಶ್ವವಿದ್ಯಾಲಯ ಸ್ಥಾಪನೆಯಾಗಿ ಮೂರು ವರ್ಷಗಳಾದರೂ ವಿದ್ಯಾರ್ಥಿಗಳಿಗೆ ಅಗತ್ಯ ಮೂಲಸೌಕರ್ಯಗಳು ಸಮರ​‍್ಕವಾಗಿ ಲಭ್ಯವಾಗಿಲ್ಲ ಎಂದು ಆರೋಪಿಸಿದರು. ರಸ್ತೆ, ನಿರಂತರ ಬಸ್ ವ್ಯವಸ್ಥೆ, ವಸತಿ ನಿಲಯಗಳು, ಕುಡಿಯುವ ನೀರು, ಪ್ರತ್ಯೇಕ ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್, ಪ್ರಯೋಗಾಲಯ, ಮಾಧ್ಯಮ ಸ್ಟುಡಿಯೋ, ಉಪನ್ಯಾಸಕರ ಹಾಗೂ ಸಿಬ್ಬಂದಿ ನೇಮಕಾತಿ ಸೇರಿದಂತೆ ಹಲವು ಮೂಲಭೂತ ಸೌಲಭ್ಯಗಳ ಕೊರತೆ ಇದೆ ಎಂದು ಹೇಳಿದರು.  

ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಸೌಲಭ್ಯ ಸಮಸ್ಯೆಗಳ ಪರಿಹಾರಕ್ಕಾಗಿ ಎಸ್‌ಎಫ್‌ಐ ನಿರಂತರ ಹೋರಾಟ, ಸಂವಾದ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಸರ್ಕಾರ ಮತ್ತು ಜನಪ್ರತಿನಿಧಿಗಳು ಅಗತ್ಯ ಅನುದಾನ ಒದಗಿಸಬೇಕು ಎಂದು ಒತ್ತಾಯಿಸಿದರು.  

ಎಸ್‌ಎಫ್‌ಐ ವಿಶ್ವವಿದ್ಯಾಲಯ ಘಟಕದ ಪ್ರಥಮ ಸಮ್ಮೇಳನವು ಜೂನ್ 17ರಂದು ವಿಶ್ವವಿದ್ಯಾಲಯ ಕ್ಯಾಂಪಸ್ನಲ್ಲಿ ನಡೆಯಲಿದ್ದು, ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.  

ಕಾರ್ಯಕ್ರಮದಲ್ಲಿ ಅರುಣ್ ಕುಮಾರ್ ನಾಗವತ್, ಶಂಭುಲಿಂಗ ಸವದತ್ತಿ, ಕಾತೇಶ್ ಪಿ.ಎಚ್‌., ಪರಶುರಾಮ ಎಸ್‌., ಅರುಣ್ ಜೆ., ನಂದಿನಿ ಕೆ.ಬಿ., ಚೈತ್ರಾ ಪಿಶೆ, ಶರಣಪ್ಪ ಜೆ.ಎಂ., ನಿಂಗರಾಜ ನೇಕರ, ಪೂಜಾ ಬಾಕಿ, ಪ್ರವೀಣ್ ಮಟ್ಟೇರ, ಶಶಾಂಕ್ ಬೋಗಾವಿ ಹಾಗೂ ಲೋಕೇಶ್ ಕೆಂಚಣ್ಣನವರ ಉಪಸ್ಥಿತರಿದ್ದರು.