ಹೋಂಬಳನಾಕಾ ಜನತಾ ಕಾಲೊನಿಯಲ್ಲಿ ರಸ್ತೆ ಅಭಿವೃದ್ಧಿಗೆ ಚಾಲನೆ

ಹೋಂಬಳನಾಕಾ ಜನತಾ ಕಾಲೊನಿಯಲ್ಲಿ ರಸ್ತೆ ಅಭಿವೃದ್ಧಿಗೆ ಚಾಲನೆ  Road development work launched in Hombalanaka Janata Colony


ಗದಗ, 26: ಗದಗ-ಬೆಟಗೇರಿ ನಗರಸಭೆಯ ವಾರ್ಡ್‌ ನಂ. 16ರ ವ್ಯಾಪ್ತಿಯ ಹೋಂಬಳನಾಕಾ ಜನತಾ ಕಾಲೊನಿ ನಿವಾಸಿಗಳ ಹಲವು ವರ್ಷಗಳ ಬೇಡಿಕೆಗೆ ಕೊನೆಗೂ ಸ್ಪಂದನೆ ದೊರೆತಿದ್ದು, ಬಡಾವಣೆಯಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ.  ಕಾಲೊನಿ ನಿವಾಸಿಗಳ ಬಹುದಿನಗಳ ಬೇಡಿಕೆಯಾಗಿದ್ದ ರಸ್ತೆ ನಿರ್ಮಾಣ ಕಾಮಗಾರಿಗೆ ನಗರಸಭೆಯ ಮಾಜಿ ಅಧ್ಯಕ್ಷ ಹಾಗೂ ಹಾಲಿ ಹಿರಿಯ ಸದಸ್ಯ ಕೃಷ್ಣ ಪರಾಪೂರ ಚಾಲನೆ ನೀಡಿದರು.  

ಹೋಂಬಳನಾಕಾ ಜನತಾ ಕಾಲೊನಿ ಅಭಿವೃದ್ಧಿಪರ ಸೇವಾ ಸಂಘದ ನಿರಂತರ ಪ್ರಯತ್ನ ಹಾಗೂ ಮನವಿಗೆ ಸ್ಪಂದಿಸಿರುವ ಕೃಷ್ಣ ಪರಾಪೂರ ಅವರು ಸಿಸಿ ರಸ್ತೆ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದಾರೆ. ಈಗಾಗಲೇ ಕಾಲೊನಿಯ ಎರಡನೇ ಲೈನ್ನ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಮೂರನೇ ಲೈನ್ನ ರಸ್ತೆ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ.  ಸುಮಾರು ಹಲವು ವರ್ಷಗಳಿಂದ ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆಯಿಂದ ಸಮಸ್ಯೆ ಎದುರಿಸುತ್ತಿದ್ದ ಕಾಲೊನಿ ನಿವಾಸಿಗಳಲ್ಲಿ ಇದೀಗ ಸಂತಸ ಮೂಡಿದೆ.