ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಿ: ಬೆಟ್ಟದೂರು
Prioritize extracurricular activities too: Bettaduru
ಕೊಪ್ಪಳ 26: ಶಾಲಾ-ಕಾಲೇಜುಗಳಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಬೇಕು. ಪಠ್ಯವು ಜ್ಞಾನದ ದಾರಿಯಾದರೆ, ಪಠ್ಯೇತರ ಚಟುವಟಿಕೆಗಳು ಬದುಕಿಗೆ ದಾರೀದೀಪವಾಗಬಲ್ಲವು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಪ್ರೊ. ಅಲ್ಲಮಪ್ರಭು ಬೆಟ್ಟದೂರು ಹೇಳಿದರು.
ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಪ್ರಥಮ ವರ್ಷದ ವಿದ್ಯಾರ್ಥಿನಿಯರ ಸ್ವಾಗತ ಸಮಾರಂಭ ಹಾಗೂ ಕಾಲೇಜಿನ ವಿವಿಧ ಘಟಕಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಜೀವನ ರೂಪಿಸುವ ಹಾಗೂ ಕೌಶಲ್ಯ ಬೆಳೆಸುವ ಶೈಕ್ಷಣೇತರ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಕೊಪ್ಪಳ ಸುತ್ತಮುತ್ತ ಕೈಗಾರಿಕೆಗಳ ಸಂಖ್ಯೆ ಹೆಚ್ಚುತ್ತಿದ್ದು, ಪರಿಸರದ ಮೇಲೆ ಆಗುತ್ತಿರುವ ಪರಿಣಾಮಗಳ ಕುರಿತು ವಿದ್ಯಾರ್ಥಿಗಳು ಜಾಗೃತರಾಗಬೇಕು ಎಂದು ಹೇಳಿದರು.
ಪರಿಸರ ಸಂರಕ್ಷಣೆಗಾಗಿ ನಡೆಯುತ್ತಿರುವ ಹೋರಾಟವು ಯುವಪೀಳಿಗೆಯ ಹಿತದೃಷ್ಟಿಯಿಂದ ನಡೆಯುತ್ತಿದ್ದು, ವಿದ್ಯಾರ್ಥಿ ಸಮುದಾಯವೂ ಇಂತಹ ಸಾಮಾಜಿಕ ಕಾಳಜಿಯ ಚಟುವಟಿಕೆಗಳಿಗೆ ಬೆಂಬಲ ನೀಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ ಕೆ. ಲಮಾಣಿ ಮಾತನಾಡಿ, ಕಾಲೇಜು ಕಳೆದ ಕೆಲವು ವರ್ಷಗಳಿಂದ ಅಭಿವೃದ್ಧಿ ಹೊಂದುತ್ತಿದ್ದು, ನುರಿತ ಅಧ್ಯಾಪಕರ ಪರಿಣಾಮಕಾರಿ ಬೋಧನೆಯಿಂದ ಉತ್ತಮ ಫಲಿತಾಂಶ ಪಡೆಯುತ್ತಿದೆ. ಹೊಸದಾಗಿ ಪ್ರವೇಶ ಪಡೆದ ವಿದ್ಯಾರ್ಥಿನಿಯರು ಕಾಲೇಜಿನ ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಾಧನೆ ಮಾಡಬೇಕು ಎಂದರು.
ಮುಖ್ಯ ಅತಿಥಿ ಬೂದಿಹಾಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಮೆಹಬೂಬ್ ಅಲಿ ಕೆ.ಎಂ. ಮಾತನಾಡಿ, **ಗುರಿ, ಸಮಯ ಪ್ರಜ್ಞೆ, ಸ್ಪರ್ಧಾ ಮನೋಭಾವ, ಶ್ರದ್ಧೆ ಹಾಗೂ ಆತ್ಮವಿಶ್ವಾಸ** ಎಂಬ ಐದು ಮಂತ್ರಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಿಕ್ಷಣಪ್ರೇಮಿ ಬಿ.ಜಿ. ಕರಿಗಾರ ಮಾತನಾಡಿದರು. ಸಾಂಸ್ಕೃತಿಕ ವಿಭಾಗ, ಎನ್‌ಎಸ್‌ಎಸ್ ಘಟಕ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥೆ ಲಲಿತಾ ಎನ್.ಕೆ. ಅವರು ಕಾಲೇಜಿನ ಉಗಮ ಮತ್ತು ವಿಕಾಸದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಐಕ್ಯೂಎಸಿ ಸಂಚಾಲಕಿ ಡಾ. ಶುಭಾ, ಕ್ರೀಡಾ ವಿಭಾಗದ ಮುಖ್ಯಸ್ಥ ಡಾ. ವಿಠೋಬ ಎಸ್., ಗ್ರಂಥಪಾಲಕ ಡಾ. ಮಲ್ಲಿಕಾರ್ಜುನ ಬಿ., ಸ್ಕೌಟ್ಸ್ ಮತ್ತು ಗೈಡ್ಸ್ ಮುಖ್ಯಸ್ಥೆ ಶುಭ ಟಿ.ಇ., ಐಟಿ ಘಟಕದ ಸುಮಿತ್ರ ಎಸ್.ವಿ., ವಿದ್ಯಾರ್ಥಿ ಕಲ್ಯಾಣಾಧಿಕಾರಿ ಸುಮಯ್ಯ ಕೆ., ಕಚೇರಿ ಅಧೀಕ್ಷಕ ಅಲ್ಲಾಭಕ್ಷ ಸೇರಿದಂತೆ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನಾಗರತ್ನಾ ಮತ್ತು ಪವಿತ್ರ ನಿರೂಪಿಸಿದರು. ಐಶ್ವರ್ಯ ಹಾಗೂ ಲಕ್ಷ್ಮೀ ಸ್ವಾಗತಿಸಿದರು. ಮಧುಮತಿ ವಂದಿಸಿದರು.
ಗಣೇಶ ವಿಸರ್ಜನೆ ವೇಳೆ ದುರಂತ : ಬೆಳಗಾವಿಯ ಯುವಕ ನೀರಲ್ಲಿ ಮುಳುಗಿ ಸಾವು
ಚನ್ನಮ್ಮ ಪ್ರತಿಮೆ ಪ್ರತಿಷ್ಠಾಪನೆಗೆ ನವೆಂಬರ 1ರ ಗಡುವು ನೀಡಿದ ಕನ್ನಡ ಸಂಘಟನೆಗಳು
ಎನ್ಒಸಿ ನೀಡಲು ಲಂಚ : ಖಾನಾಪುರ ತಾಲೂಕು ಆರೋಗ್ಯಾಧಿಕಾರಿ ಲೋಕಾಯುಕ್ತ ಬಲೆಗೆ
ಅರ್ಧಕ್ಕೆ ನಿಂತ ಚನ್ನಮ್ಮ ಪ್ರತಿಮೆ ಕಾಮಗಾರಿ: ಅವ್ಯವಹಾರದ ಶಂಕೆ : ಲೆಕ್ಕ ಕೊಡಿ ಹೋರಾಟಕ್ಕೆ ಕನ್ನಡ ಹೋರಾಟಗಾರರು ಸಜ್ಜು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ 