ಪೋಟೊಗ್ರಾಫಿ ಯುವಜನತೆಗೆ ಲಾಭದಾಯಕ ಕ್ಷೇತ್ರ: ಜಿಪಂ ಉಪಕಾರ್ಯದರ್ಶಿ ಶಶಿಕಾಂತ ಶಿವಪೂರೆ

ಪೋಟೊಗ್ರಾಫಿ ಯುವಜನತೆಗೆ ಲಾಭದಾಯಕ ಕ್ಷೇತ್ರ: ಜಿಪಂ ಉಪಕಾರ್ಯದರ್ಶಿ ಶಶಿಕಾಂತ ಶಿವಪೂರೆ Photography is a profitable field for the youth: ZP Deputy Secretary Shashikant Shivapure

ಬಳ್ಳಾರಿ 06:  ಪೋಟೊಗ್ರಾಫಿ ಉದ್ಯಮವು ಇಂದು ಅತ್ಯಂತ ಜನಪ್ರಿಯ ಹಾಗೂ ಲಾಭದಾಯಕ ಕ್ಷೇತ್ರವಾಗಿ ಹೊರಹೊಮ್ಮಿದೆ. ಯುವಕರು ಆಸಕ್ತಿಯಿಂದ ತರಬೇತಿ ಪಡೆದು ಸ್ವಾವಲಂಬಿ ಯಶಸ್ವಿ ಉದ್ಯಮಿಗಳಾಗಬೇಕು ಎಂದು ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಶಿಕಾಂತ ಶಿವಪೂರೆ ಅವರು ಕರೆ ನೀಡಿದರು.ನಗರದ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯ ಆವರಣದಲ್ಲಿ ಜಿಲ್ಲಾ ಪಂಚಾಯತ್ ಇವರ ಸಹಯೋಗದೊಂದಿಗೆ ಶನಿವಾರ ಹಮ್ಮಿಕೊಳ್ಳಲಾಗಿದ್ದ ಫೋಟೋಗ್ರಾಫಿ ಮತ್ತು ವಿಡಿಯೋಗ್ರಾಫಿ ತರಬೇತಿ ಉದ್ಘಾಟನೆ ಹಾಗೂ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದರು. ಪರಿಸರ ಸಂರಕ್ಷಣೆ ನಮ್ಮೆಲ್ಲರ ಪ್ರಮುಖ ಜವಾಬ್ದಾರಿಯಾಗಿದೆ.

ಪ್ರತಿಯೊಬ್ಬರೂ ತಮ್ಮ ಮನೆಯ ಮುಂದೆ ಕಡ್ಡಾಯವಾಗಿ ಮರ ಬೆಳೆಸಬೇಕು. ನಾವು ಪರಿಸರವನ್ನು ರಕ್ಷಿಸಿದರೆ, ಪರಿಸರ ನಮ್ಮನ್ನು ರಕ್ಷಿಸುತ್ತದೆ ಎಂದು ಕಿವಿಮಾತು ಹೇಳಿದರು.ಕೆನರಾ ಬ್ಯಾಂಕ್‌ನ ಜಿಲ್ಲಾ ಮಾರ್ಗದರ್ಶಿ ವ್ಯವಸ್ಥಾಪಕ ಗೀರೀಶ್ ವಿ. ಕುಲಕರ್ಣಿ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಫೋಟೋಗ್ರಾಫಿ ಉದ್ಯಮವು ಹೊಸ ಟ್ರೆಂಡ್ ಸೃಷ್ಟಿಸಿದೆ. ಪ್ರಿ-ವೆಡ್ಡಿಂಗ್ ಮತ್ತು ಫೋಟೋ ಶೂಟ್‌ಗಳಿಗಾಗಿ ಜನರು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಶಿಬಿರಾರ್ಥಿಗಳು ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಬ್ಯಾಂಕ್‌ನಿಂದ ಕಿರು ಆರ್ಥಿಕ ಸಾಲ ಸೌಲಭ್ಯವನ್ನು ಪಡೆದು ಸ್ವಂತ ಉದ್ಯಮ ಪ್ರಾರಂಭಿಸಬೇಕು ಎಂದು ಮಾರ್ಗದರ್ಶನ ನೀಡಿದರು. ಜೊತೆಗೆ ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂದರು. 

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸಂಸ್ಥೆಯ ಆವರಣದಲ್ಲಿ 30 ಜನ ಶಿಬಿರಾರ್ಥಿಗಳೊಂದಿಗೆ ಒಟ್ಟಾಗಿ ಸಸಿಗಳನ್ನು ನೆಡುವ ಮೂಲಕ ಕಾರ್ಯಕ್ರಮ ಅರ್ಥಪೂರ್ಣವಾಗಿ ಯಶಸ್ವಿಗೊಳಿಸಲಾಯಿತು.ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕ ವಿನಯಕುಮಾರ ಬಿ.ಕೊಳ್ಳುರಮಠ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ರಾಜೇಂದ್ರ ಹಾಗೂ ಸಂಸ್ಥೆಯ ಸಿಬ್ಬಂದಿಗಳಾದ ಜಡೇಪ್ಪ, ಸಿದ್ದಲಿಂಗಮ್ಮ, ಸಂತೋಷ ಕುಮಾರ ಮತ್ತು ಪರಮೇಶ ಉಪಸ್ಥಿತರಿದ್ದರು.