ಚರಿತ್ರೆ ನಿರ್ಮಿಸಿದ ಪಾಲಿ ಸಂಸ್ಥೆ : ಡಾ.ಕೃಷ್ಣ ಕೋಲ್ಹಾರ ಕುಲಕರ್ಣಿ

ಚರಿತ್ರೆ ನಿರ್ಮಿಸಿದ ಪಾಲಿ ಸಂಸ್ಥೆ : ಡಾ.ಕೃಷ್ಣ ಕೋಲ್ಹಾರ ಕುಲಕರ್ಣಿ Pali Institute that made history: Dr. Krishna Kolhara Kulkarni

ಲೋಕದರ್ಶನ ವರದಿ 

ಕಲಬುರಗಿ 06:  ಪಾಲಿ ಇನ್ಸ್‌ಟಿಟ್ಯೂಟ್‌ವತಿಯಿಂದ ಇಂದು ಕಲಬುರಗಿಯ ಸಿದ್ಧಾರ್ಥ ಕಾನೂನು ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಇಂಟರ್ ನ್ಯಾಶನಲ್ ಪಾಲಿ ಇನ್ಸ್‌ ಟಿಟ್ಯೂಟ್ ನ ಗೌರವ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ ಅವರು ಸಂಕಲಿಸಿದ ಪಾಲಿ-ಕನ್ನಡ ಶಬ್ದಕೋಶಗಳ ಐದು ಸಂಪುಟಗಳನ್ನು ವಿಜಯಪುರದ ಹಿರಿಯ ವಿದ್ವಾಂಸರಾದ ಡಾ. ಕೃಷ್ಣ ಕೋಲ್ಹಾರ ಕುಲಕರ್ಣಿಯವರು ಲೋಕಾರೆ​‍್ಣಗೊಳಿಸಿ ಮಾತನಾಡುತ್ತಾ, ಶಬ್ದಕೋಶಗಳು ಓದುಗರನ್ನು ವಿದ್ವತ್ ಲೋಕಕ್ಕೆ ಕೊಂಡೊಯ್ಯುತ್ತವೆ ಎಂದು ಹೇಳಿದರು.

ಪಾಲಿ ಭಾಷೆ ಬಲ್ಲವರು ಕರ್ನಾಟಕದಲ್ಲಿ ಬಹಳ ಕಡಿಮೆ. ಪಾಲಿ ಭಾಷೆ ಕನ್ನಡದಲ್ಲಿ ಬಳಕೆಯಲ್ಲಿಯೂ ಇಲ್ಲ. ಇಂತಹ ಭಾಷೆ ಕುರಿತು ಮಾತನಾಡಲು ತುಂಬಾ ವಿದ್ವತ್ ಬೇಕು. ಮಲ್ಲೇಪುರಂ ಅವರು ಅದಕ್ಕೆ ಅರ್ಹರು.  ಪಾಲಿ-ಕನ್ನಡ ಶಬ್ದಕೋಶ ಮಲ್ಲೇಪುರಂ ಅವರಂತಹ ವಿದ್ವಾಂಸರಿಗೆ ಸಾಧ್ಯ. ಅದನ್ನು ಅವರು ಸಮರ್ಥವಾಗಿ ಮಾಡಿದ್ದಾರೆ. ಐದು ಪಾಲಿ ಶಬ್ದಕೋಶ ಸಂಪುಟಗಳು ನನಗೆ ತುಂಬಾ ಸಂತೋಷವನ್ನುಂಟು ಮಾಡಿವೆ. ಕನ್ನಡ ಸಾಹಿತ್ಯಕ್ಕೆ ಈ ಕೋಶಗಳು ಹೆಚ್ಚಿನ ಶ್ರೀಮಂತಿಕೆ ತಂದು ಕೊಡಲಿವೆ ಎಂದರು. 

ಲೋಕಾರೆ​‍್ಣಗೊಂಡ ಪಾಲಿ-ಕನ್ನಡ ಶಬ್ದಕೋಶಗಳ ಐದು ಸಂಪುಟಗಳ ಕುರಿತು ಪ್ರೊ.ಎಚ್‌.ಟಿ.ಪೋತೆಯವರು ಪರಿಚಯಾತ್ಮಕವಾಗಿ ಮಾತನಾಡುತ್ತಾ, ಕಲಬುರಗಿಯಲ್ಲಿ ಪಾಲಿ ಇನ್ಸ್‌ಟಿಟ್ಯೂಟ್ ಬಹುದೊಡ್ಡ ಕನಸು ಹೊತ್ತು ಆರಂಭಗೊಂಡಿದೆ. ಅದರ ಒತ್ತಾಸೆಯಾಗಿ, ಸದಾಶಯದೊಂದಿಗೆ ಡಾ.ಮಲ್ಲಿಕಾರ್ಜುನ ಖರ್ಗೆಜಿಯವರ ಮಹಾದಾಸೆಯಿಂದ ಸಂಸ್ಥೆ ಜನ್ಮ ತಳೆದಿದೆ. ಬುದ್ಧನ ಚಿಂತನೆಗಳು, ಮೌಲ್ಯಗಳು ಜನಸಾಮಾನ್ಯರಿಗೆ ಮತ್ತು ಯುವಪೀಳಿಗೆಗೆ ತಲುಪಿಸಬೇಕಾದ ಅನಿವಾರ್ಯತೆಯಿದೆ ಎಂಬ ಕಾರಣಕ್ಕಾಗಿ ಪಾಲಿ ಅಧ್ಯಯನ ಸಂಸ್ಥೆ ಕಾರ್ಯಪ್ರವೃತ್ತಗೊಂಡಿದೆ. ಇಂತಹ ದೊಡ್ಡ ಸಂಸ್ಥೆಗೆ ಬಹುಶ್ರುತ ಭಾಷಾ ಪಂಡಿತರು, ಶಾಸ್ತ್ರ ಚೂಡಾಮಣಿಗಳು ಮತ್ತು ಅಪಾರ ವಿದ್ವತ್‌ಪೂರ್ಣ ವ್ಯಕ್ತಿತ್ವದ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಅವರನ್ನು ಗೌರವ ನಿರ್ದೇಶಕರಾಗಿ ನೇಮಿಸಿದ್ದಾರೆ.

ಅದರ ಫಲಶ್ರುತಿಯಾಗಿಯೇ ಹಲವಾರು ಕಾರ್ಯ ಚಟುವಟಿಕೆಗಳು, ಪ್ರಕಟಣೆಗಳು ನಿರಂತರವಾಗಿ ನಡೆಯುತ್ತಿವೆ. ಇಲ್ಲಯವರೆಗೆ ಬುದ್ಧ ಮತ್ತು ಆತನ ಧಮ್ಮ ಕನ್ನಡ ಅನುವಾದ, ಸಂಕ್ಷಿಪ್ತ ಪಾಲಿ-ಕನ್ನಡ ನಿಘಂಟು, ಪ್ರವಾಸಿಗರು ಕಂಡ ಬೌದ್ಧ ಸಂಸ್ಕೃತಿ, ಪಾಲಿ-ಕನ್ನಡ ಶಬ್ದಕೋಶ ಐದು ಸಂಪುಟಗಳಂತಹ ಮೌಲಿಕ ಕೃತಿಗಳನ್ನು ಪ್ರಕಟಿಸುತ್ತಾ ಬಂದಿದೆ. ಪ್ರಸ್ತುತ ಇವು ಬುದ್ಧನ ವಿಚಾರಧಾರೆಗಳು, ಮೌಲ್ಯಗಳು ಅರಿತುಕೊಳ್ಳಲಿಕ್ಕೆ, ಅಧ್ಯಯನ, ಸಂಶೋಧನೆ ಮಾಡುವವರಿಗೆ ಕೈಪಿಡಿಯಂತಿವೆ. ವಿಸ್ತೃತವಾದ ಮತ್ತು ಅಷ್ಟೇ ಅರ್ಥಪೂರ್ಣವಾದ ಪ್ರಸ್ತಾವನೆಯೊಂದಿಗೆ ಪಾಳಿ ಭಾಷೆಯ ಶಬ್ದಗಳಿಗೆ ಕನ್ನಡ ಅರ್ಥಗಳನ್ನು ನೀಡುವುದರ ಮೂಲಕ  ಹೊಸ ಮನ್ವಂತರಕ್ಕೆ ನಾಂದಿ ಹಾಡಿದ್ದಾರೆ. ಓದುಗರ ಜ್ಞಾನ ಕ್ಷಿತಿಜವನ್ನು ವಿಸ್ತರಿಸಿಕೊಳ್ಳಲು ಈ ಶಬ್ದಕೋಶಗಳು ದಾರೀದೀಪವಾಗಲಿವೆ. ಇಂತಹ ಸಂಪುಟಗಳ ಸದುಪಯೋಗವನ್ನು ಓದುಗರು, ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಸಂಶೋಧಕರು ಪಡೆದುಕೊಳ್ಳಬೇಕೆಂದು ಸದಾಶಯ ವ್ಯಕ್ತಪಡಿಸಿದರು.