ಬೆಂಗಳೂರು, ಜ.28 ಕೇಂದ್ರದ ಉದ್ದೇಶಿತ ಒಂದು ರಾಷ್ಟ್ರ ಒಂದು ತೆರಿಗೆ ಪದ್ಧತಿಯನ್ನು ರಾಜ್ಯದಲ್ಲಿ ತರಬೇಕೇ ಬೇಡವೇ ಎಂಬ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿಗಳೂ ಆಗಿರುವ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಹೇಳಿದ್ದಾರೆ.ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್ಚು ಬೆಲೆಬಾಳುವ ವಾಹನಗಳ ನೋಂದಣಿ ಬೇರೆಬೇರೆ ರಾಜ್ಯಗಳಲ್ಲಿ ನಡೆಯುತ್ತಿದೆ. ಆದ್ದರಿಂದ ಕೇಂದ್ರ ಸರ್ಕಾರ ಒಂದು ರಾಷ್ಟ್ರ ಒಂದು ತೆರಿಗೆ ನೀತಿ ಇರಬೇಕೆಂದು ಬಯಸಿದೆ. ಈ ಕಾನೂನು ಜಾರಿಗೊಳಿಸಿದರೆ ಸಾವಿರ ಕೋಟಿನಷ್ಟು ಕೊರತೆಯಾಗಬಹುದೆಂದು ಅಂದಾಜಿಸಲಾಗಿದೆ. ರಾಜ್ಯ ಸರ್ಕಾರ ಪ್ರಸಕ್ತ ಶೇ 16, ಶೇ 18ಹಾಗೂ ಶೇ.20ರಂತೆ ಮೂರು ಸ್ಲ್ಯಾಬ್‌ಗಳಲ್ಲಿ ತೆರಿಗೆ ವಿಧಿಸುತ್ತಿದೆ. ಕೇಂದ್ರ ಸರ್ಕಾರ ಸಹ ಶೇ.8,10,12ರಂತೆ ಮೂರು ಸ್ಲ್ಯಾಬ್‌ಗಳಲ್ಲಿ ತೆರಿಗೆ ವಿಧಿಸುತ್ತಿದೆ. ಹೀಗಾಗಿ ಈ ಕಾನೂನು ಜಾರಿ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಿ ಸಾಧಕಬಾಧಕ ನೋಡಿಕೊಂಡು ಮುಂದಿನ ಹೆಜ್ಜೆ ಇಡಲಾಗುವುದು ಎಂದು ಸವದಿ ಸ್ಪಷ್ಟಪಡಿಸಿದರು.