ಹೊಸದಿಲ್ಲಿ 11: ಪಾಕಿಸ್ತಾನವು ಭಾರತದ ಮೇಲೆ ದಾಳಿ ಮಾಡಿದರೆ, ದೇಶವು ಪ್ರಬಲವಾಗಿಯೇ ತಕ್ಕ ಪ್ರತ್ಯುತ್ತರ ನೀಡಲಿದೆ ಎಂದು ಪಾಕಿಸ್ತಾನದೊಂದಿಗಿನ ಉದ್ವಿಗ್ನತೆ ಶಮನದ ಕುರಿತ ಚರ್ಚೆಯ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಅವರಿಗೆ ಸ್ಪಷ್ಟ ಮಾತುಗಳಲ್ಲಿ ತಿಳಿಸಿದ್ದಾರೆ ಎಂದು ಸರ್ಕಾರಿ ಮೂಲಗಳು ಹೇಳಿವೆ.
ಜೆ.ಡಿ.ವ್ಯಾನ್ಸ್ ಜೊತೆ ದೂರವಾಣಿ ಮೂಲಕ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ “ಕಾಶ್ಮೀರದ ವಿಚಾರದಲ್ಲಿ ಮೂರನೇಯವರ ಮಧ್ಯಸ್ಥಿಕೆ ಬೇಕಾಗಿಲ್ಲ. ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಬೇಕಾದರೆ, ಪಾಕಿಸ್ತಾನ ತನ್ನಲ್ಲಿರುವ ಉಗ್ರರ ನಮಗೆ ಹಸ್ತಾಂತರಿಸಬೇಕು, ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ), ಅಕ್ರಮ ಪ್ರದೇಶಗಳ ಹಿಂದಿರುಗಿಸುವುದು ಮತ್ತು ಭಯೋತ್ಪಾದಕರ ಹಸ್ತಾಂತರದ ಬಗ್ಗೆ ಮಾತ್ರ ಚರ್ಚಿಸುವ ಈ ಷರತ್ತಿಗೆ ಒಪ್ಪಿದರೆ ಮಾತ್ರ ಮಾತುಕತೆಗೆ ಸಿದ್ಧರಿದ್ದೇವೆ ಅದರ ಹೊರತಾಗಿ ಮಾತನಾಡಲು ಬೇರೇನೂ ಇಲ್ಲ. ಪಾಕ್ ಆಕ್ರಮಿತ ಕಾಶ್ಮೀರ ನಮಗೆ ಮರಳಬೇಕು. ಕಾಶ್ಮೀರದ ಬಗ್ಗೆ ಭಾರತದ ನಿಲುವು ಸ್ಪಷ್ಟವಾಗಿದೆ” ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.
ಇದೇ ವೇಳೆ ಆಪರೇಷನ್ ಸಿಂದೂರ್ ಮುಗಿದಿಲ್ಲ ಮತ್ತು ನಾವು ಈ ಹಿಂದಿಗಿಂತಲೂ ಭಿನ್ನವಾಗಿದ್ದೇವೆ ಹೊಸ ಸ್ಥಿತಿಯಲ್ಲಿದ್ದೇವೆ; ಜಗತ್ತು ಇದನ್ನು ಒಪ್ಪಿಕೊಳ್ಳಬೇಕು, ಪಾಕಿಸ್ತಾನ ಇದನ್ನು ಒಪ್ಪಿಕೊಳ್ಳಬೇಕು, ಇದು ಎಂದಿನಂತೆ ನಡೆಯಲು ಸಾಧ್ಯವಿಲ್ಲ ಎಂದು ಮೋದಿ ದೃಢವಾಗಿ ಅಮೆರಿಕಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.