ಆಪರೇಷನ್ ಸಿಂಧೂರ: ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿಯಿಂದ ವಿಜಯೋತ್ಸವ ರ‍್ಯಾಲಿ

Victory rally by former cricketer Shahid Afridi

ಇಸ್ಲಾಮಾಬಾದ್ 12: ಕೆಳಗೆ ಬಿದ್ರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ ಭಾರತೀಯ ಸೇನೆಯಿಂದ ಮರ್ಮಾಘಾತಕ್ಕೆ ತುತ್ತಾಗಿರುವ ಪಾಕಿಸ್ತಾನ ಇದೀಗ ಅದನ್ನು ಮರೆಮಾಚುವ ಪ್ರಯತ್ನವಾಗಿ ವಿಜಯೋತ್ಸವ ರ‍್ಯಾಲಿ ಹಮ್ಮಿಕೊಂಡಿದೆ.

ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ಸೇನಾ ಸಂಘರ್ಷದಲ್ಲಿ ಪಾಕಿಸ್ತಾನ ಸೇನೆ ಜಯಭೇರಿ ಭಾರಿಸಿದೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ವಿಜಯೋತ್ಸವ ರ‍್ಯಾಲಿ ನಡೆಸಿರುವ ವಿಡಿಯೋ ವೈರಲ್ ಆಗುತ್ತಿದೆ.

ಶಾಹಿದ್ ಅಫ್ರಿದಿ ಕರಾಚಿಯಲ್ಲಿ ಈ ವಿಜಯೋತ್ಸವ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದು, ಸಶಸ್ತ್ರ ಪಡೆಗಳೊಂದಿಗೆ ಒಗ್ಗಟ್ಟನ್ನು ಪ್ರದರ್ಶಿಸಲು ರ‍್ಯಾಲಿ ನಡೆಸಿದ್ದಾರೆ. ರ‍್ಯಾಲಿ ವೇಳೆ ಶಾಹಿದ್ ಅಫ್ರಿದಿ ಪಾಕಿಸ್ತಾನದ ಸಶಸ್ತ್ರ ಪಡೆಗಳನ್ನು ಶ್ಲಾಘಿಸಿದ್ದು, ಪಾಕಿಸ್ತಾನದ ಜನರು ತಮ್ಮ ಸೈನ್ಯದೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದಾರೆ. ಭಾರತದ ವಿರುದ್ಧ ಪಾಕಿಸ್ತಾನಕ್ಕೆ ಗೆಲುವು ನೀಡಿದ ಸರ್ವಶಕ್ತನಾದ ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

ಈ ರ‍್ಯಾಲಿಯು ಯುದ್ಧದ ಆಚರಣೆಯಲ್ಲ, ಒಗ್ಗಟ್ಟಿನ ಶಾಂತಿಯುತ ಪ್ರದರ್ಶನವಾಗಿದೆ. ಪಾಕಿಸ್ತಾನ ಶಾಂತಿಗೆ ಬದ್ಧವಾಗಿದೆ. ಭಾರತದ ಆಕ್ರಮಣಕಾರಿ ನೀತಿಗಳು ವಿರುದ್ಧ ಪರಿಣಾಮ ಬೀರಿವೆ, ಇದು ಪಾಕಿಸ್ತಾನವನ್ನು ಪ್ರಚೋದಿಸಿದ್ದಕ್ಕೆ ಭಾರತಕ್ಕೆ ಆದ ತಕ್ಕಶಾಸ್ತಿ ಎಂದು ಆಫ್ರಿದಿ ಕಿಡಿಕಾರಿದ್ದಾರೆ.

ಇದೇ ವೇಳೆ ತಪ್ಪು ಮಾಹಿತಿಯನ್ನು ಹರಡಲು ಮತ್ತು ಸುಳ್ಳು ರಾಷ್ಟ್ರೀಯತೆಯನ್ನು ಪ್ರಚೋದಿಸಲು ಭಾರತೀಯ ಮಾಧ್ಯಮಗಳನ್ನು ಅಫ್ರಿದಿ ಟೀಕಿಸಿದರು. ಭಾರತದ ಪ್ರಧಾನಿ ಮೋದಿಯವರ ಯುದ್ಧೋನ್ಮಾದವು ಭಾರತವನ್ನು ಜಾಗತಿಕವಾಗಿ ಪ್ರತ್ಯೇಕಿಸಿದೆ. ಭಾರತೀಯ ಸೇನಾ ಪಡೆಗಳು ಮಕ್ಕಳು ಸೇರಿದಂತೆ ನಾಗರಿಕರನ್ನು ಮತ್ತು ಪಾಕಿಸ್ತಾನದೊಳಗಿನ ಧಾರ್ಮಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡಿವೆ ಎಂದು ಅವರು ಹೇಳಿದರು.