ಮುಂಡಗೋಡ ಆಸ್ಪತ್ರೆಗೆ ನೂತನ ನ್ಯಾಯಾಧೀಶರ ದಿಢೀರ್ ಭೇಟಿ:ವೈದ್ಯರಿಗೆ ಖಡಕ್ ಸೂಚನೆ”

ಮುಂಡಗೋಡ ಆಸ್ಪತ್ರೆಗೆ ನೂತನ ನ್ಯಾಯಾಧೀಶರ ದಿಢೀರ್ ಭೇಟಿ:ವೈದ್ಯರಿಗೆ ಖಡಕ್ ಸೂಚನೆ” New Judge Makes Surprise Visit to Mundgod Hospital; Issues Stern Instructions to Doctors

ಲೋಕದರ್ಶನ ವರದಿ  

ಮುಂಡಗೋಡ  26 : ಮುಂಡಗೋಡ ನ್ಯಾಯಾಲಯಕ್ಕೆ ನೂತನವಾಗಿ ನೇಮಕಗೊಂಡಿರುವ ಮಾನ್ಯ ಸಿವಿಲ್ ಜಡ್ಜ್‌ ಹಾಗೂ ಜೆಎಂಎಫ್ಸಿ ನ್ಯಾಯಾಧೀಶರು ಮತ್ತು ತಾಲೂಕು ಕಾನೂನು ಸೇವೆಗಳ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಶಿವರಾಜು ಹೆಚ್‌.ಎಸ್‌. ಅವರು ಶನಿವಾರ ಮುಂಡಗೋಡ ತಾಲೂಕು ಆಸ್ಪತ್ರೆಗೆ ದಿಢೀರ್ ಅನೀರೀಕ್ಷಿತ ಭೇಟಿ ನೀಡಿ ಆಸ್ಪತ್ರೆಯ ಕಾರ್ಯವೈಖರಿಯನ್ನು ಪರೀಶೀಲಿಸಿದರು. ಪರೀಶೀಲನೆ ವೇಳೆ ಕೆಲ ವೈದ್ಯಾಧಿಕಾರಿಗಳು ನಿಗದಿತ ಸಮಯಕ್ಕೆ ಆಸ್ಪತ್ರೆಗೆ ಹಾಜರಾಗದಿರುವುದನ್ನು ಗಮನಿಸಿದ ನ್ಯಾಯಾಧೀಶರು, ಮುಂದಿನ ದಿನಗಳಲ್ಲಿ ಎಲ್ಲಾ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಆಡಳಿತ ವೈದ್ಯಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಬಳಿಕ ಆಸ್ಪತ್ರೆಯ ವಿವಿಧ ವಿಭಾಗಗಳನ್ನು ಪರೀಶೀಲಿಸಿದ ಅವರು, ಲಭ್ಯವಿರುವ ಮೂಲಸೌಕರ್ಯಗಳು ಹಾಗೂ ಕೊರತೆಗಳ ಕುರಿತು ಮಾಹಿತಿ ಪಡೆದುಕೊಂಡರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳೊಂದಿಗೆ ನೇರವಾಗಿ ಮಾತನಾಡಿ ಅವರ ಆರೋಗ್ಯ, ಚಿಕಿತ್ಸೆಯ ಗುಣಮಟ್ಟ ಹಾಗೂ ಎದುರಾಗುತ್ತಿರುವ ಸಮಸ್ಯೆಗಳ ಬಗ್ಗೆ ವಿಚಾರಿಸಿದರು. ಇದೇ ವೇಳೆ ಆಸ್ಪತ್ರೆಯ ಅಭಿವೃದ್ಧಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳ ಕುರಿತು ವೈದ್ಯಾಧಿಕಾರಿಗಳಿಗೆ ಸಲಹೆ ಮತ್ತು ಸೂಚನೆಗಳನ್ನು ನೀಡಿದರು. ಆಸ್ಪತ್ರೆಯ ಗೋಡೆಗಳಿಗೆ ತಂಬಾಕು, ಗುಟಕಾ ಹಾಗೂ ಇತರೆ ಪಾನ್ ಪದಾರ್ಥಗಳನ್ನು ಸೇವಿಸಿ ಉಗುಳುತ್ತಿರುವ ಪ್ರಕರಣಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಧೀಶರು,

ಇಂತಹ ಕೃತ್ಯ ಎಸಗುವವರ ವಿರುದ್ಧ ಕೆ.ಪಿ. ಆಕ್ಟ್‌ ಅಡಿ ಪ್ರಕರಣ ದಾಖಲಿಸುವಂತೆ ವೈದ್ಯಾಧಿಕಾರಿಗಳು ಹಾಗೂ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿಗೆ ನಿರ್ದೇಶನ ನೀಡಿದರು. ನಂತರ ಅವರು ಮುಂಡಗೋಡ ಪಟ್ಟಣದ ಕಲಾಲ ಓಣಿಯಲ್ಲಿರುವ ಅಂಗನವಾಡಿ ಕೇಂದ್ರಕ್ಕೂ ಭೇಟಿ ನೀಡಿ ಅಲ್ಲಿನ ಮೂಲಭೂತ ಸೌಕರ್ಯಗಳನ್ನು ಪರೀಶೀಲಿಸಿದರು. ಮಕ್ಕಳಿಗೆ ನೀಡಲಾಗುತ್ತಿರುವ ಪೌಷ್ಟಿಕ ಆಹಾರದ ಗುಣಮಟ್ಟ ಹಾಗೂ ವಿತರಣೆಯ ಬಗ್ಗೆ ಮಾಹಿತಿ ಪಡೆದು ಪರೀಶೀಲನೆ ನಡೆಸಿದರು. ಭೇಟಿಯ ಬಳಿಕ ಆಸ್ಪತ್ರೆ ಮತ್ತು ಅಂಗನವಾಡಿ ಕೇಂದ್ರದ ಪರೀಶೀಲನೆಗೆ ಸಂಬಂಧಿಸಿದ ವರದಿಯನ್ನು ಮಾನ್ಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರವಾರಕ್ಕೆ ಸಲ್ಲಿಸಿದರು.