ಕೊಪ್ಪಳ 11: ಮಹಾರಾಷ್ಟ್ರದ ಅಹಲ್ಯಾನಗರದ ಹಿಂದಿ ಅನುಸಂದಾನ ಪ್ರಸಾರ ಕೇಂದ್ರದ ವತಿಯಿಂದ ಹಂಪಿ (ಕರ್ನಾಟಕ) ದಲ್ಲಿ ರಾಷ್ಟ್ರೀಯ ಕವಿಗೋಷ್ಠಿ ಆಯೋಜಿಸಲಾಗಿದೆ. ದಿ. ಮೇ 12 ರಿಂದ ಮೇ 15 ರವರೆಗೆ ಹಂಪಿಯ ಹೋಟೆಲ್ ಮಯೂರ ಭುವನೇಶ್ವರಿಯಲ್ಲಿ ಈ ಕಾವ್ಯೋತ್ಸವ ನಡೆಯುತ್ತಿದೆ.
ಇದು ಬಹುಭಾಷಾ ಕಾವ್ಯೋತ್ಸವವಾಗಿದ್ದು ಹಿಂದಿ, ಮರಾಠಿ, ಉರ್ದು, ಇಂಗ್ಲಿಷ್, ಪಂಜಾಬಿ, ಭೋಜ್‌ಪುರಿ ಮತ್ತು ಕನ್ನಡ ಭಾಷೆಯ ಕವಿಗಳು ಭಾಗವಹಿಸಲಿದ್ದಾರೆ. ಇತಿಹಾಸ ಸಂಶೋಧಕ ರಾಕೇಶ್ ಸಾಳುಂಖೆ (ಸತಾರಾ), ಖ್ಯಾತ ವಿಡಂಬನಕಾರ ಪ್ರಭಾಕರ ಸಾಲೇಗಾಂವ್ಕರ್ (ಬೀಡು), ಖ್ಯಾತ ಬರಹಗಾರ ಚಂದ್ರಶೇಖರ್ ವಸ್ತ್ರದ್ (ಗದಗ), ವಿಮರ್ಶಕ ಚಂದ್ರಕಾಂತ್ ಬಾಬರ್ (ಸಾಂಗ್ಲಿ) ಮತ್ತು ಪಂಜಾಬ್ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸುಖದೇವ್ ಸಿಂಗ್ ಸಿರ್ಸಾ (ಚಂಡೀಗಢ) ಸೇರಿದಂತೆ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ರಾಷ್ಟ್ರೀಯ ಕವಿಗೋಷ್ಠಿಯನ್ನು ಬೆಳಗಾವಿಯ ಹಿರಿಯ ಕನ್ನಡ ಬರಹಗಾರರಾದ ಡಾ. ಸರಜೂ ಕಾಟ್ಕರ್ ಉದ್ಘಾಟಿಸಲಿದ್ದು ನಾಲ್ಕು ದಿನಗಳಲ್ಲಿ ಒಟ್ಟು ಎರಡು ವಿಚಾರ ಸಂಕಿರಣಗಳು ಮತ್ತು 8 ಕವಿಗೋಷ್ಠಿಗಳು ನಡೆಯಲಿವೆ. ಮಹಾರಾಷ್ಟ್ರದ 40 ಕವಿಗಳು ಮತ್ತು ಕನ್ನಡದ 20 ಕವಿಗಳು ಇದರಲ್ಲಿ ಭಾಗಿಯಾಗಲಿದ್ದು ಕನ್ನಡ ಕವಿ ಸತೀಶ್ ಕುಲಕರ್ಣಿ, ಪ್ರೊ. ಜೈಸಿಂಗ್ ಗಡೇಕರ್, ಡಾ. ಉರ್ಮಿಳಾ ಚಾಕುರ್ಕರ್, ಮೋಹನ್ ಶಿರ್ಸತ್ ತಮ್ಮ ಅಭಿಪ್ರಾಯಗಳನ್ನು ಮಂಡಿಸಲಿದ್ದು, ಬೆಳಗಾವಿಯ ಕವಿ ಮತ್ತು ಅನುವಾದಕಿ ಸುಮಾ ಕಾಟ್ಕರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಇದೇ ಕಾರ್ಯಕ್ರಮದಲ್ಲಿ ಸಾಂಗ್ಲಿಯ ಯಶವಂತ್ ಮಾಲಿಯವರ ‘ಸಖಿ', ಸಂಜಯ್ ಬೊರುಡೆ ಅವರ ಕವನ ಸಂಕಲನ ‘ಪರ್ಣಸುಕ್ತ'ದ ಎರಡನೇ ಮಲಯಾಳಂ ಆವೃತ್ತಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕುರಿತು ಖಾಂಡೇಶ್‌ನ ಬುಡಕಟ್ಟು ಕವಿ ಸುನಿಲ್ ಗಾಯಕ್ವಾಡ್ ಬರೆದ ‘ಜೋಹರ್' ಎಂಬ ಜೀವನ ಚರಿತ್ರೆ ಲೋಕಾರೆ್ಣಯಾಗಲಿವೆ. ಬೆಳಗಾವಿಯ ರವಿ ಕೊಸ್ತರಗಿ, ಕೊಪ್ಪಳದ ಮಹೇಶ ಬಳ್ಳಾರಿ, ಕೇರಳದ ಮೋಹನ್ ಕುಂತೂರು, ಸಾಕ್ಷಿ ಟಿಕೋಟಿಕರ್, , ವಿಠ್ಠಲ ಗಾಯಕವಾಡ, ಡಾ. ಅನಿರುದ್ಧ ಕುಷ್ಟಗಿ, ರಾಜೇಶ ಬಳ್ಳಾರಿ, ಡಾ. ವಿಟ್ಟಲ ಗಾಯಕವಾಡ, ಸಂತೋಷ ನಾಯ್ಕ್ ಮೊದಲಾದವರು ಕವಿಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ ಎಂದು ರಾಷ್ಟ್ರೀಯ ಕಾವ್ಯೋತ್ಸವದ ಸಂಚಾಲಕ ಡಾ. ಸಂಜಯ ಬೊರುಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.