ರಾಜ್ಯಮಟ್ಟದ 11ನೇ ಕನ್ನಡ ಕಲ್ಪಿತ ನ್ಯಾಯಾಲಯ ಸ್ಪರ್ಧೆಗೆ ಚಾಲನೆ

May law students be role models for others

ಕಾನೂನು ವಿದ್ಯಾರ್ಥಿಗಳು ಬೇರೆಯವರಿಗೆ ಆದರ್ಶವಾಗಲಿ 

ಹುಬ್ಬಳ್ಳಿ 17: ಕಾನೂನು ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳಿವೆ. ಕಾನೂನು ಶಿಕ್ಷಣವನ್ನು ಕೆಳಮಟ್ಟದ ಕೋರ್ಸ್‌ ಎಂದು ವಿದ್ಯಾರ್ಥಿಗಳು ಭಾವಿಸಬಾರದು. ಜೀವನದಲ್ಲಿ ಉನ್ನತ ಸಾಧನೆ ಮಾಡುವತ್ತ ಗಮನ ಹರಿಸಬೇಕಾಗಿದೆ. ಕಾನೂನು ವಿದ್ಯಾರ್ಥಿಗಳು ಬೇರೆಯವರಿಗೆ ಆದರ್ಶವಾಗಬೇಕು ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ವೆಂಕಟೇಶ ನಾಯ್ಕ ಟಿ. ಹೇಳಿದರು.  

ಇಂದು ನವನಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕಾನೂನು ಶಾಲೆಯ ಸಭಾಂಗಣದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ 11ನೇ ಕನ್ನಡ ಕಲ್ಪಿತ ನ್ಯಾಯಾಲಯ ಸ್ಪರ್ಧೆಯನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.  

ನ್ಯಾಯಾಧೀಶರಿಗೆ ಮನವರಿಕೆ ಆಗುವ ನಿಟ್ಟಿನಲ್ಲಿ ವಾದ ಮಾಡಬೇಕು. ಪ್ರಕರಣಗಳಲ್ಲಿ ಸೋಲು ಗೆಲುವು ಅನಿವಾರ್ಯವಾಗಿದೆ. ಪ್ರಾಮಾಣಿಕವಾಗಿ ನಿಮ್ಮ ವಾದವನ್ನು ಮಂಡಿಸಬೇಕಾಗುತ್ತದೆ. ಆ ಮೂಲಕ ನ್ಯಾಯಲಯದಲ್ಲಿ ನಿಮ್ಮ ಕೌಶಲ್ಯ, ಪಾಂಡಿತ್ಯವನ್ನು ನಿರೂಪಿಸಬೇಕು. ಕಲ್ಪಿತ ನ್ಯಾಯಾಲಯ ಸ್ಪರ್ಧೆಯಿಂದ ಭಾಷಾ ಕೌಶಲ್ಯ, ಬರವಣಿಗೆ ಕೌಶಲ್ಯ ಬೆಳೆಯುವುದು. ಅಲ್ಲದೇ ನ್ಯಾಯಾಲಯದಲ್ಲಿ ವಾದ ಮಾಡುವ ತರಬೇತಿಯನ್ನು ಪಡೆದಂತೆ ಆಗಲಿದೆ. ಮುಂದಿನ ದಿನಗಳಲ್ಲಿ ಉತ್ತಮ ವಕೀಲರಾಗಲು ಸೂಕ್ತ ವೇದಿಕೆಯನ್ನು ಒದಗಿಸುತ್ತದೆ ಎಂದು ಅವರು ತಿಳಿಸಿದರು.  

ಕಾನೂನು ವಿದ್ಯಾರ್ಥಿಗಳು ಯಾವುದೇ ಭಯವಿಲ್ಲದೇ ನಿರರ್ಗಳವಾಗಿ ವಾದವನ್ನು ಮಂಡಿಸಲು ಅಣಿಯಾಗಬೇಕು. ನ್ಯಾಯಾಧೀಶರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಹೆದರಬಾರದು. ನ್ಯಾಯಾಧೀಶರ ಮುಂದೆ ವಾದ ಮಾಡಲು ಸ್ಪರ್ಧೆ ಅನುಕೂಲವಾಗಲಿದೆ. ನ್ಯಾಯಾಧೀಶರ ಗಮನ ಸೆಳೆಯುವಲ್ಲಿ ಮುಂದಾಗಬೇಕಿದೆ. ಸಮಯ ಪರಿಪಾಲನೆಗೆ ಪ್ರಾಮುಖ್ಯತೆಯನ್ನು ನೀಡಬೇಕು. ಸಮಯವನ್ನು ಸರಿಯಾಗಿ ಬಳಸಿಕೊಳ್ಳಬೇಕು. ಎಲ್ಲಾ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಬೇಕು. ಇದರಿಂದ ಭಯದ ಭಾವನೆ ಹೋಗಲಾಡಿಸಬಹುದು ಎಂದು ತಿಳಿ ಹೇಳಿದರು.  

ಇತಿಹಾಸ, ರಾಜಕೀಯಶಾಸ್ತ್ರ, ಸಮಾಜಶಾಸ್ತ್ರ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಕಾನೂನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಜನರಿಗೆ ಮೂಲಭೂತ ಹಕ್ಕುಗಳ ಬಗ್ಗೆ ತಿಳಿಯಪಡಿಸಬೇಕಿದೆ. ಮಹಿಳಾ ವಕೀಲರನ್ನು ಗೌರವಿಸಬೇಕು. ಸಾಮಾಜಿಕ ಜಾಲತಾಣಗಳನ್ನು ಜ್ಞಾನಕ್ಕಾಗಿ ಬಳಸಿಕೊಳ್ಳಬೇಕಾಗುತ್ತದೆ. ವಿದ್ಯಾರ್ಥಿಗಳು ಹೆಚ್ಚಾಗಿ ಪುಸ್ತಕಗಳನ್ನು ಓದಬೇಕು ಎಂದರು.  

ದೇಶದ ವಿವಿಧ ರಾಜ್ಯಗಳಲ್ಲಿ ಉಚಿತ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಅದರಲ್ಲೂ ಆರೋಗ್ಯ, ಶಿಕ್ಷಣ, ವಿದ್ಯುತ್, ಕುಡಿಯುವ ನೀರು, ಲ್ಯಾಪ್‌ಟಾಪ್ ಸೇರಿದಂತೆ ಅನೇಕ ಉಚಿತ ಯೋಜನೆಗಳನ್ನು ಬೇರೆ ಬೇರೆ ರಾಜ್ಯಗಳಲ್ಲಿ ಜಾರಿಗೊಳಿಸಲಾಗಿದೆ. ತಮಿಳುನಾಡಿನಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗಿದೆ. ಬಡ ರಾಜ್ಯಗಳಲ್ಲಿ ಉಚಿತ ಯೋಜನೆಯನ್ನು ಜಾರಿಗೆ ತರುವುದರಿಂದ ಸಾಕಷ್ಟು ಅನುಕೂಲವಾಗಲಿದೆ. ಅರ್ಹ ಫಲಾನುಭವಿಗಳಿಗೆ ಯೋಜನೆಗಳು ದೊರೆಯುವಂತಾಗಬೇಕು. ಬಳಕೆದಾರರಿಂದ ಯಾವುದೇ ಶುಲ್ಕವನ್ನು ಪಡೆಯದೇ ಅವರ ಜೀವನ ಮಟ್ಟ ಸುಧಾರಿಸುವ ಕಲ್ಯಾಣ ಕಾರ್ಯಕ್ರಮಗಳನ್ನು ಉಚಿತವಾಗಿ ಅನುಷ್ಠಾನಕ್ಕೆ ತರಲಾಗಿದೆ. ಸಾಮಾಜಿಕ ನ್ಯಾಯ, ಮಾನವ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕಿದೆ. ಉಚಿತ ಯೋಜನೆಗಳು ಯಾವ ರೀತಿಯಲ್ಲಿ ಅನುಷ್ಠಾನವಾಗುತ್ತಿವೆ ಎಂಬುದರ ಬಗ್ಗೆ ವರದಿ ಸಿದ್ಧಪಡಿಸುವುದು ಅವಶ್ಯವಾಗಿದೆ. ರಾಜ್ಯದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು. ಸಾಮಾಜಿಕ ಪ್ರಗತಿಯ ಜೊತೆಗೆ ಸಮಾಜದ ಎಲ್ಲ ವರ್ಗದ ಜನರಿಗೆ ಯೋಜನೆಗಳು ದೊರೆಯಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಮೂಲ ಸೌಲಭ್ಯಗಳು ದೊರೆಯುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.  

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಡಾ. ಸಿ. ಬಸವರಾಜು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶ್ವವಿದ್ಯಾಲಯದಲ್ಲಿ ಕಲ್ಪಿತ ನ್ಯಾಯಾಲಯ ಸ್ಪರ್ಧೆಯನ್ನು ನಿರಂತರವಾಗಿ ಏರಿ​‍್ಡಸುತ್ತಾ ಬರಲಾಗಿದೆ. ಈ ಸ್ಪರ್ಧೆಯು ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಉತ್ತಮ ವಕೀಲರಾಗಲು ಅವಕಾಶವನ್ನು ಒದಗಿಸಲಿದೆ. ಸಂವಿಧಾನದ ಚೌಕಟ್ಟಿನ ಒಳಗೆ ಕೆಲಸ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ. ಎಲ್ಲ ವೃತ್ತಿಗಳಲ್ಲಿ ವಕೀಲ ವೃತ್ತಿ ಶ್ರೇಷ್ಠ ವೃತ್ತಿಯಾಗಿದೆ. ಎಲ್ಲ ಕ್ಷೇತ್ರಕ್ಕೂ ನ್ಯಾಯ ದಾನ ಅತ್ಯಗತ್ಯವಾಗಿದೆ. ಸಾಮಾಜಿಕ ಜವಾಬ್ದಾರಿ ನಮ್ಮ ಮೇಲಿದೆ. ವಕೀಲರು ತಮ್ಮ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕಾಗಿದೆ. ಸಂವಿಧಾನದ ಚೌಕಟ್ಟಿನೊಳಗೆ ಕಾನೂನುಗಳನ್ನು ಜಾರಿಗೆ ತರಲಾಗುತ್ತದೆ. ಜನರಿಗೆ ಕಾನೂನುಗಳ ಅಗತ್ಯವಿದೆ. ಸಂವಿಧಾನದ ಆಶಯಗಳನ್ನು ಈಡೇರಿಸುವಲ್ಲಿ ಸರ್ಕಾರಗಳು ಕಾರ್ಯಪ್ರವೃತ್ತವಾಗಿವೆ. ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷ ಕಳೆದರೂ ಜನರಿಗೆ ಮೂಲ ಸೌಕರ್ಯಗಳು ಸಿಗುತ್ತಿಲ್ಲ. ಸಾಮಾಜಿಕ ಪೀಡುಗುಗಳನ್ನು ತೊಡೆದು ಹಾಕಬೇಕಿದೆ. ಅಸ್ಪೃಶ್ಯತೆ ನಿವಾರಣೆಗೆ ಮುಂದಾಗಬೇಕಾಗಿದೆ.  

ಇಂದು ಸಮಾನತೆಯನ್ನು ಸಾಧಿಸಲು ಸಾಧ್ಯವಾಗುತ್ತಿಲ್ಲ. ಉತ್ತಮ ಸಂಸ್ಕಾರದಿಂದ ಮಕ್ಕಳನ್ನು ಬೆಳೆಸಬೇಕು. ಪ್ರತಿಯೊಬ್ಬರೂ ಸಂವಿಧಾನದ ಆಶಯಗಳಿಗೆ ಗೌರವ ನೀಡಬೇಕು. ಸಮ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕು. ಸಂವಿಧಾನದ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಜನರಿಗೆ ತಿಳಿ ಹೇಳಬೇಕಿದೆ. ಕಾನೂನು ವಿದ್ಯಾರ್ಥಿಗಳು ಸಮಾಜ ಸೇವೆಗೆ ಬದ್ಧರಾಗಬೇಕು. ಜನರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಗುರುತರ ಜವಾಬ್ದಾರಿಯನ್ನು ನಿರ್ವಹಿಸಬೇಕಾಗುತ್ತದೆ. ಬಾಲ್ಯವಿವಾಹ, ಬಾಲ ಕಾರ್ಮಿಕ ಪದ್ಧತಿ, ಜೀತ ಪದ್ಧತಿ, ಬಡತನ ಸೇರಿದಂತೆ ಹಲವಾರು ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ಮುಂದಾಗಬೇಕಿದೆ. ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕು. ಉತ್ತಮ ನಾಗರಿಕ ಸಮಾಜ ನಿರ್ಮಾಣದ ಕಡೆಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಬಣ್ಣಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿಗಳಾದ ಸಂಜೀವಕುಮಾರ ಸಿಂಗ್, ಪರೀಕ್ಷಾಂಗದ ಕುಲಸಚಿವರಾದ ಪ್ರೊ.(ಡಾ.) ರತ್ನಾ ಆರ್‌. ಭರಮಗೌಡರ್, ಸಹಾಯಕ ಪ್ರಾಧ್ಯಾಪಕರಾದ ಡಾ.ರಂಗಸ್ವಾಮಿ ಡಿ ಸೇರಿದಂತೆ ವಿವಿಧ ಕಾಲೇಜುಗಳ ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಸಿಬ್ಬಂದಿ ಇತರರು ಭಾಗವಹಿಸಿದ್ದರು.  

ಶ್ರೀದೇವಿ ಖಾನಾಪುರ ನಿರೂಪಿಸಿದರು. ಪ್ರಮತಿ ಪ್ರಾರ್ಥಿಸಿದರು. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನಾಡಗೀತೆಯನ್ನು ಪ್ರಸ್ತುತ ಪಡಿಸಿದರು. ಆಕಾಶ ಕುಲಕರ್ಣಿ ಸ್ವಾಗತಿಸಿದರು. ಸಂದೀಪ ತಂಡಗಳನ್ನು ಪರಿಚಯಿಸಿದರು. ಸ್ನೇಹಾ ವಂದಿಸಿದರು.  

ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಿಗೆ ಹೊಸದಾಗಿ ಪ್ರವೇಶ ಬಯಸುವ ವಿದ್ಯಾರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಹುಬ್ಬಳ್ಳಿ 17: ಹುಬ್ಬಳ್ಳಿ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಅರಳೀಕಟ್ಟಿ, ಬ್ಯಾಹಟ್ಟಿ, ಬಸವೇಶ್ವರನಗರ ಹುಬ್ಬಳ್ಳಿ, ನೂಲ್ವಿ, ರಾಯನಾಳ, ವರೂರ, ಭೈರಿದೇವರಕೊಪ್ಪ, ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ ರಾಜನಗರ ಮತ್ತು ತಿರುಮಲಕೊಪ್ಪ ವಸತಿ ನಿಲಯಗಳಿಗೆ 2025-26 ನೇ ಸಾಲಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಿಗೆ ಹೊಸದಾಗಿ ಪ್ರವೇಶ ಬಯಸುವ ವಿದ್ಯಾರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಬಯಸುವ ಪ್ರವರ್ಗ-1, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರ ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ವರಮಾನ ರೂ. 1.00 ಲಕ್ಷ ಮತ್ತು ಪ್ರವರ್ಗ-2ಎ, 2ಬಿ, 3ಎ, 3ಬಿ ಈ ವರ್ಗಗಳಿಗೆ ಸೇರಿದವರ ಪೋಷಕರ ವಾರ್ಷಿಕ ವರಮಾನ ರೂ. 44,500/- ಒಳಗೆ ಇರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅರ್ಜಿಗಳನ್ನು http://bcwd.karnataka.gov.in/ವೆಬ್‌ಸೈಟ್ ಮೂಲಕ ಜೂನ್ 10 ರೊಳಗಾಗಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ತಾಂತ್ರಿಕ ತಾಂತ್ರಿಕ ತೋದರೆಗಳಾದಲ್ಲಿ  bcwdhelpline@gmail.com  ಇ-ಮೇಲ್ ಮುಖಾಂತರ ಅಥವಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಥವಾ ತಾಲ್ಲೂಕು ಅಧಿಕಾರಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಸಂಪರ್ಕಿಬಹುದು. ಸಹಾಯವಾಣಿ ಸಂಖ್ಯೆ 8050770004, 8050770005 ಮತ್ತು 9449108069 ಕರೆಮಾಡಿ ಮಾಹಿತಿ ಪಡೆಯಬಹುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಾದ ನಾಗರತ್ನಾ ಪಿ. ಕ್ಯಾಸನೂರ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.