ಚಿತ್ರಕಲಾ ಶಿಕ್ಷಕರ ನೇಮಕಾತಿಗೆ ಪ್ರತ್ಯೇಕ ಅವಕಾಶ ಕಲ್ಪಿಸಿ

ಚಿತ್ರಕಲಾ ಶಿಕ್ಷಕರ ನೇಮಕಾತಿಗೆ ಪ್ರತ್ಯೇಕ ಅವಕಾಶ ಕಲ್ಪಿಸಿ Make separate provision for the recruitment of art teachers

ತಾಳಿಕೋಟಿ 08 : ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಚಿತ್ರಕಲಾ ಶಿಕ್ಷಕರ ನೇಮಕಾತಿಗೆ ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ದೃಶ್ಯಬಿಂಬ ಕಲಾ ಪ್ರತಿಷ್ಠಾನದ ವತಿಯಿಂದ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರ​‍್ಪ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಚಿತ್ರಕಲಾ ಶಿಕ್ಷಕರ ನೇಮಕಾತಿ ಕೊನೆಯದಾಗಿ 2008ರಲ್ಲಿ ನಡೆದಿದ್ದು, ನಂತರ ಹಲವು ವರ್ಷಗಳಿಂದ ನೇಮಕಾತಿ ನಡೆದಿಲ್ಲ. ಇದರಿಂದಾಗಿ ಅನೇಕ ಅರ್ಹ ಚಿತ್ರಕಲಾ ಪದವೀಧರರು ಉದ್ಯೋಗಾವಕಾಶದ ನೀರೀಕ್ಷೆಯಲ್ಲಿದ್ದು, ಕೆಲವರು ವಯೋಮಿತಿ ಮೀರುವ ಪರಿಸ್ಥಿತಿಗೆ ತಲುಪಿದ್ದಾರೆ.

ಈ ಕುರಿತು ಸಚಿವರ ಗಮನಕ್ಕೆ ತರಲಾಯಿತು. ಸರ್ಕಾರಿ ಶಾಲೆಗಳ ಮಕ್ಕಳಲ್ಲಿ ಸೃಜನಶೀಲತೆ, ಕಲ್ಪನಾಶಕ್ತಿ, ಏಕಾಗ್ರತೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಚಿತ್ರಕಲಾ ಶಿಕ್ಷಣದ ಮಹತ್ವವಿದೆ. ಆದ್ದರಿಂದ ಖಾಲಿ ಇರುವ ಚಿತ್ರಕಲಾ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವುದರ ಜೊತೆಗೆ, ಮುಂದಿನ ನೇಮಕಾತಿಯಲ್ಲಿ ಚಿತ್ರಕಲಾ ಶಿಕ್ಷಕರಿಗೆ ಪ್ರತ್ಯೇಕ ಅವಕಾಶ ಕಲ್ಪಿಸಬೇಕು ಎಂದು ಪ್ರತಿಷ್ಠಾನದ ವತಿಯಿಂದ ಮನವಿ ಮಾಡಲಾಯಿತು. ರಾಜ್ಯದಲ್ಲಿ ಹಲವು ವರ್ಷಗಳಿಂದ ಉದ್ಯೋಗದ ನೀರೀಕ್ಷೆಯಲ್ಲಿರುವ ಅರ್ಹ ಕಲಾ ಪದವೀಧರರ ಪರಿಸ್ಥಿತಿಯನ್ನು ಮಾನವೀಯ ದೃಷ್ಟಿಯಿಂದ ಪರಿಗಣಿಸಿ, ಅವರ ಕಲಾ ವಿದ್ಯೆ ಹಾಗೂ ಪ್ರತಿಭೆಯನ್ನು ಮಕ್ಕಳ ಕಲಾ ಶಿಕ್ಷಣಕ್ಕೆ ಬಳಸಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು.

ಮನವಿ ಸ್ವೀಕರಿಸಿದ ಶಿಕ್ಷಣ ಸಚಿವ ಮಧು ಬಂಗಾರ​‍್ಪ ಅವರು, ವಿಷಯವನ್ನು ಸಕಾರಾತ್ಮಕವಾಗಿ ಪರಿಗಣಿಸಿ ಚಿತ್ರಕಲಾ ಶಿಕ್ಷಕರಿಗೆ ಪ್ರತ್ಯೇಕ ನೇಮಕಾತಿ ಮಾಡುವ ಕುರಿತು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಅಲ್ಲದೆ ಕಲಾವಿದರು ಹಾಗೂ ಕಲಾ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ದೃಶ್ಯಬಿಂಬ ಕಲಾ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರು ಹಾಗೂ ತಾಳಿಕೋಟಿ ತಾಲೂಕಿನ ಮೈಲೇಶ್ವರ ಗ್ರಾಮದ ಬ್ರಿಲಿಯಂಟ್ ಶಾಲೆಯ ಪ್ರೌಢಶಾಲಾ ಚಿತ್ರಕಲಾ ಶಿಕ್ಷಕ ಸತೀಶ ಕೇಮಶೆಟ್ಟಿ ಉಪಸ್ಥಿತರಿದ್ದರು ಎಂದು ತಿಳಿಸಿದ್ದಾರೆ.