ಬ್ರಹ್ಮಕುಮಾರಿಯರ ನಶಾಮುಕ್ತ ಭಾರತ ಅಭಿಯಾನಕ್ಕೆ ಚಾಲನೆ

ಬ್ರಹ್ಮಕುಮಾರಿಯರ ನಶಾಮುಕ್ತ ಭಾರತ ಅಭಿಯಾನಕ್ಕೆ ಚಾಲನೆ  Launch of the Brahma Kumaris' 'Drug-Free India' campaign

ಕೊಪ್ಪಳ 02: ಬ್ರಹ್ಮಕುಮಾರಿಯ ಸಂಸ್ಥೆಯು ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಹಾಗೂ ಗೃಹ ಸಚಿವಾಲಯದ ಅಧೀನದಲ್ಲಿರುವ ನಾರ್ಕೋಟಿಕ್ಸ್‌ ಕಂಟ್ರೋಲ್ ಬ್ಯೂರೊ (ಎನ್ಸಿಬಿ) ಸಹಯೋಗದಲ್ಲಿ **‘ನಶಾಮುಕ್ತ ಭಾರತ ಅಭಿಯಾನ’**ದಡಿ ದೇಶಾದ್ಯಂತ ವ್ಯಾಪಕ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಬ್ರಹ್ಮಕುಮಾರಿ ಯೋಗಿನಿ ಅಕ್ಕ ತಿಳಿಸಿದರು.  

ನಗರದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ನಶಾಮುಕ್ತ ಭಾರತ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಜನಾಂದೋಲನವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ 2026ರ ಆಗಸ್ಟ್‌ ತಿಂಗಳಲ್ಲಿ ದೇಶಾದ್ಯಂತ 10 ಕೋಟಿ ವ್ಯಸನಮುಕ್ತ ಪ್ರತಿಜ್ಞೆ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.  

ಶಾಲೆಗಳು, ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಆರೋಗ್ಯಕರ ಜೀವನಮೌಲ್ಯಗಳನ್ನು ಬೆಳೆಸುವುದು, ರಾಜಯೋಗ ಧ್ಯಾನ, ಆರೋಗ್ಯಕರ ಜೀವನಶೈಲಿ ಹಾಗೂ ವ್ಯಸನಮುಕ್ತ ಸಮಾಜ ನಿರ್ಮಾಣದ ಕುರಿತು ಜಾಗೃತಿ ಮೂಡಿಸುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ಯುವಜನರಲ್ಲಿ ಸಕಾರಾತ್ಮಕ ಚಿಂತನೆ, ಆತ್ಮವಿಶ್ವಾಸ, ಉತ್ತಮ ಸಂಸ್ಕಾರ ಮತ್ತು ಜವಾಬ್ದಾರಿಯುತ ನಾಗರಿಕತೆಯನ್ನು ಬೆಳೆಸಲು ಈ ಅಭಿಯಾನ ಪ್ರೇರಣೆಯಾಗಲಿದೆ ಎಂದು ಅವರು ತಿಳಿಸಿದರು.  

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಗವಿಸಿದ್ದಪ್ಪ ಹೊಸಮನಿ ಮಾತನಾಡಿ, ವ್ಯಸನದಿಂದ ದೂರವಿರುವ ಮನೋಬಲ ಮತ್ತು ಆತ್ಮವಿಶ್ವಾಸವನ್ನು ಬೆಳೆಸುವಲ್ಲಿ ಇಂತಹ ಜನಜಾಗೃತಿ ಕಾರ್ಯಕ್ರಮಗಳು ಪರಿಣಾಮಕಾರಿ ಪಾತ್ರ ವಹಿಸುತ್ತವೆ ಎಂದರು.  

ಹಿರಿಯ ವಕೀಲ ವಿ.ಎಂ. ಭೂಸನೂರುಮಠ ಮಾತನಾಡಿ, ದುಶ್ಚಟಗಳು ಮತ್ತು ದುರ್ವ್ಯಾಸನಗಳು ವ್ಯಕ್ತಿಯ ಆರೋಗ್ಯ ಹಾಗೂ ಜೀವನವನ್ನೇ ಹಾಳುಮಾಡುತ್ತವೆ. ಇಂತಹ ಸಂದರ್ಭಗಳಲ್ಲಿ ಜನಜಾಗೃತಿ ಕಾರ್ಯಕ್ರಮಗಳು ಅತ್ಯಂತ ಅಗತ್ಯ ಎಂದು ಅಭಿಪ್ರಾಯಪಟ್ಟರು.  

ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ಉಪಾಧ್ಯಕ್ಷ ಹಾಲಯ್ಯ ಹುಡೆ ಜಾಲಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಯ್ಯನಗೌಡ ಸೋಮಶೇಖರ ರಾಜೂರ, ನಿವೃತ್ತ ಬ್ಯಾಂಕ್ ವ್ಯವಸ್ಥಾಪಕ ಆದಪ್ಪ ಕುಂಬಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.