ಕಬ್ಬು ದರ ಘೋಷಣೆವರೆಗೆ ಸಕ್ಕರೆ ಕಾರ್ಖಾನೆ ಆರಂಭಿಸದಂತೆ ಸೂಚನೆ

ಕಬ್ಬು ದರ ಘೋಷಣೆವರೆಗೆ ಸಕ್ಕರೆ ಕಾರ್ಖಾನೆ ಆರಂಭಿಸದಂತೆ ಸೂಚನೆ  Instruction issued not to start sugar factories until the sugarcane price is announced

ಲೋಕದರ್ಶನ ವರದಿ 

  ವಿಜಯಪುರ 25: ಜಿಲ್ಲೆಯಲ್ಲಿ ಈ ವರ್ಷ ಕಬ್ಬು ದರ ಘೋಷಣೆಯಾಗುವವರೆಗೆ 10 ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಲು ಅನುಮತಿ ನೀಡಬಾರದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಜಿಲ್ಲಾಧಿಕಾರಿ ಡಾ. ಕೆ. ಆನಂದ್ ಅವರಿಗೆ ಮನವಿ ಸಲ್ಲಿಸಿದರು. ಈ ವರ್ಷ ಕಬ್ಬಿನ ದರ ನಿಗದಿಪಡಿಸುವುದು, ಕಳೆದ ವರ್ಷದ ಬಾಕಿ ಬಿಲ್ ಪಾವತಿಸುವುದು ಹಾಗೂ 50 ಬಾಕಿ ಬಿಡುಗಡೆ ಮಾಡುವುದು ಸೇರಿದಂತೆ ರೈತರ ಸಮಸ್ಯೆಗಳನ್ನು ಬಗೆಹರಿಸಿದ ಬಳಿಕವೇ ಕಾರ್ಖಾನೆಗಳಿಗೆ ಕಬ್ಬು ನುರಿಸಲು ಅನುಮತಿ ನೀಡಬೇಕು ಎಂದು ಆಗ್ರಹಿಸಿದರು.  

ಸೆಪ್ಟೆಂಬರ್ 29ರಂದು ಹುಬ್ಬಳ್ಳಿಯ ಪ್ರಹ್ಲಾದ ಜೋಶಿ ಅವರ ಕಚೇರಿಗೆ ಮುತ್ತಿಗೆ ಹಾಕಿ, ಬಳಿಕ ಗುಳಾಪುರದಲ್ಲಿ ಹೋರಾಟ ನಡೆಸಲಾಗುವುದು ಎಂದು ಸಂಘದ ಪದಾಧಿಕಾರಿಗಳು ತಿಳಿಸಿದರು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸೇರಿ ಪ್ರತಿ ಟನ್ ಕಬ್ಬಿಗೆ 1,000 ಹೆಚ್ಚುವರಿ ನೀಡಿ ಒಟ್ಟು 5,500 ದರ ನಿಗದಿಪಡಿಸಬೇಕು. ಇಲ್ಲವಾದರೆ ಕಬ್ಬು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಎಚ್ಚರಿಸಿದರು.  

ಕೃಷಿ ವೆಚ್ಚ ಕಳೆದ ವರ್ಷಗಳಿಗಿಂತ ಹಲವು ಪಟ್ಟು ಹೆಚ್ಚಾಗಿದ್ದರೂ ಕಬ್ಬಿಗೆ ಸಮರ​‍್ಕ ಬೆಲೆ ನೀಡುತ್ತಿಲ್ಲ. ಕಾರ್ಖಾನೆ ಮಾಲೀಕರು ತೂಕದಲ್ಲಿ ಮೋಸ ಮಾಡುತ್ತಿರುವುದು ಹಾಗೂ ಬಿಲ್ ಪಾವತಿಯಲ್ಲಿ ವಿಳಂಬ ಮಾಡುತ್ತಿರುವುದರಿಂದ ರೈತರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದರು.  

ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ್ ಕುಬಕಡ್ಡಿ, ರಾಜ್ಯ ಉಪಾಧ್ಯಕ್ಷ ಕಲ್ಲು ಸೊನ್ನದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮನಗೌಡ ಪಾಟೀಲ, ಜಿಲ್ಲಾ ಉಪಾಧ್ಯಕ್ಷ ಮಹಾದೇವ ಬನಸೋಡೆ, ಮುಖಂಡರಾದ ಕಲ್ಲಪ್ಪ ಸೊನ್ನದ, ಅಂಬರೇಶ ಭೈರಾಮಡಿ ಹಾಗೂ ಯಮನೇಶ ಭಜಂತ್ರಿ ಉಪಸ್ಥಿತರಿದ್ದರು.