ಕಾರವಾರ

ಬೆಡಸಗಾಂವ ಸಹಕಾರಿ ಸಂಘದಲ್ಲಿ ನೂತನ ರಸಗೊಬ್ಬರ ಹಾಗೂ ಕೀಟನಾಶಕ ಮಳಿಗೆ ಶುಭಾರಂಭ

ಬೆಡಸಗಾಂವ ಸಹಕಾರಿ ಸಂಘದಲ್ಲಿ ನೂತನ ರಸಗೊಬ್ಬರ ಹಾಗೂ ಕೀಟನಾಶಕ ಮಳಿಗೆ ಶುಭಾರಂಭ

ಲೋಕದರ್ಶನ ವರದಿ

ಮುಂಡಗೋಡ: ತಾಲೂಕಿನ ಬೆಡಸಗಾಂವ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿಯಮಿತ ವತಿಯಿಂದ ರೈತರ ಅನುಕೂಲಕ್ಕಾಗಿ ನೂತನ ರಸಗೊಬ್ಬರ ಹಾಗೂ ಕೀಟನಾಶಕ ಓಷಧಿಗಳ ಮಳಿಗೆಯನ್ನು ಜುಲೈ 12ರಂದು ಶ್ರೀ ದೇವರ ಪೂಜಾ ಕಾರ್ಯಕ್ರಮದೊಂದಿಗೆ ಉದ್ಘಾಟಿಸಲಾಯಿತು.   ಮುಂಡಗೋಡ ತಾಲೂಕಿನ ಬೆಡಸಗಾಂವ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಅಡಿಕೆ, ಭತ್ತ, ಜೋಳ ಸೇರಿದಂತೆ ವಿವಿಧ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ಅಗತ್ಯವಿರುವ ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಖರೀದಿಸಲು ದೂರದ ಪಟ್ಟಣಗಳಿಗೆ ತೆರಳಬೇಕಾಗುತ್ತಿತ್ತು.

ಇದರಿಂದ ರೈತರಿಗೆ ಸಮಯ ಮತ್ತು ಪ್ರಯಾಣ ವೆಚ್ಚದ ಹೆಚ್ಚುವರಿ ಹೊರೆ ಉಂಟಾಗುತ್ತಿತ್ತು.   ರೈತರ ಬಹುದಿನಗಳ ಬೇಡಿಕೆಯನ್ನು ಪರಿಗಣಿಸಿದ ಸಹಕಾರಿ ಸಂಘದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗವು ಪ್ರತ್ಯೇಕವಾಗಿ ರಸಗೊಬ್ಬರ ಮತ್ತು ಕೀಟನಾಶಕ ಮಳಿಗೆಯನ್ನು ಆರಂಭಿಸಿದ್ದು, ಇದರಿಂದ ರೈತರಿಗೆ ಒಂದೇ ಸ್ಥಳದಲ್ಲಿ ಗುಣಮಟ್ಟದ ಕೃಷಿ ಪರಿಕರಗಳು ಲಭ್ಯವಾಗಲಿವೆ. ಜೊತೆಗೆ ಸಮಯ ಮತ್ತು ಹಣದ ಉಳಿತಾಯವಾಗುವುದರೊಂದಿಗೆ ಸಂಘದ ವ್ಯವಹಾರ ವೃದ್ಧಿಗೂ ಸಹಕಾರಿಯಾಗಲಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದರು.

ಈ ವೇಳೆಯಲ್ಲಿ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್‌.ಎಂ. ನಾಯ್ಕ, ಸಂಘದ ಅಧ್ಯಕ್ಷ ಜೈದೇವ ನಾಯ್ಕ (ಬೆಕ್ಕೋಡ), ಮುಂಡಗೋಡ ಮಾರ್ಕೆಟಿಂಗ್ ಸೊಸೈಟಿ ನಿರ್ದೇಶಕ ಕಾಂತರಾಜ ನಾಯ್ಕ (ಬೆಕ್ಕೋಡ), ಸಂಘದ ಮಾಜಿ ಅಧ್ಯಕ್ಷ ಹಾಗೂ ಸಹಕಾರಿ ಧುರೀಣ ವಿ.ಎಸ್‌. ನಾಯ್ಕ (ಬೆಡಸಗಾಂವ), ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರದೀಪ್ ಆಯ್‌. ನಾಯ್ಕ, ಆಡಳಿತ ಮಂಡಳಿಯ ಸದಸ್ಯರು, ಸಿಬ್ಬಂದಿ, ಸಂಘದ ಸದಸ್ಯರು, ಸುತ್ತಮುತ್ತಲಿನ ಗ್ರಾಮಗಳ ರೈತರು, ಗ್ರಾಹಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. 


ಸುದ್ದಿ ಓದಿ