ಮಹಿಳೆಯರು ಸಬಲರಾದರೆ ಸಮಾಜ ಸದೃಢ: ಗುರುಸಿದ್ಧ ಸ್ವಾಮೀಜಿ

ಮಹಿಳೆಯರು ಸಬಲರಾದರೆ ಸಮಾಜ ಸದೃಢ: ಗುರುಸಿದ್ಧ ಸ್ವಾಮೀಜಿ If women are empowered, society becomes strong: Gurusidda Swamiji

ಲೋಕದರ್ಶನ ವರದಿ  

ಬೆಳಗಾವಿ 08 : ಮಹಿಳೆಯರು ಸಬಲರಾದಾಗ ಮಾತ್ರ ಕುಟುಂಬ, ಸಮಾಜ ಹಾಗೂ ರಾಷ್ಟ್ರ ಮತ್ತಷ್ಟು ಸದೃಢವಾಗಿ ಬೆಳೆಯಲು ಸಾಧ್ಯ. ಇಂದಿನ ಜಾಗತೀಕರಣದ ಸಂದರ್ಭದಲ್ಲಿ ಪುರುಷಹಿಮಹಿಳೆ ಎಂಬ ಯಾವುದೇ ಭೇದವಿಲ್ಲದೆ ಎಲ್ಲರನ್ನೂ ಸಮಾನತೆಯ ದೃಷ್ಟಿಯಿಂದ ಕಾಣಬೇಕು. ಮಹಿಳೆಯರಿಗೆ ಸೂಕ್ತ ಅವಕಾಶ ಮತ್ತು ಪ್ರೋತ್ಸಾಹ ದೊರೆತರೆ ಅವರು ಜೀವನದ ಯಾವುದೇ ಕ್ಷೇತ್ರದಲ್ಲಿಯೂ ಗಮನಾರ್ಹ ಸಾಧನೆ ಮಾಡಬಲ್ಲರು ಎಂದು ಕಾರಂಜಿಮಠದ ಪೂಜ್ಯ ಶ್ರೀ ಗುರುಸಿದ್ಧ ಮಹಾಸ್ವಾಮೀಜಿ ಹೇಳಿದರು.  ನಗರದ ಕಾರಂಜಿಮಠದಲ್ಲಿ ಸೆ. 7ರಂದು ಆಯೋಜಿಸಲಾಗಿದ್ದ ಮಹಿಳಾ ಸಮಾವೇಶ ಹಾಗೂ ಶಿವಾನುಭವ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಮಹಿಳೆಯರಲ್ಲಿ ಆತ್ಮಸ್ಥೈರ್ಯ ಹಾಗೂ ಆತ್ಮವಿಶ್ವಾಸವನ್ನು ಬೆಳೆಸುವ ನಿಟ್ಟಿನಲ್ಲಿ ನಿರಂತರವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಅಗತ್ಯವಿದೆ.

ಮಹಿಳೆಯರ ಸಾಮರ್ಥ್ಯವನ್ನು ಗುರುತಿಸಿ ಅವರಿಗೆ ಅವಕಾಶ ಕಲ್ಪಿಸುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು.ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಅರಿತುಕೊಂಡು ಮುನ್ನಡೆಯಬೇಕು. ಶಿಕ್ಷಣ, ಉದ್ಯೋಗ, ಕಲೆ, ಸಾಹಿತ್ಯ, ಸಾಮಾಜಿಕ ಸೇವೆ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಹಿಳೆಯರು ತಮ್ಮದೇ ಆದ ಛಾಪು ಮೂಡಿಸುವ ಸಾಮರ್ಥ್ಯ ಹೊಂದಿದ್ದಾರೆ. ಅವರಿಗೆ ಕುಟುಂಬ ಮತ್ತು ಸಮಾಜದ ಬೆಂಬಲ ದೊರೆತರೆ ಸಾಧನೆಯ ಹಾದಿಯಲ್ಲಿ ಇನ್ನಷ್ಟು ದೂರ ಸಾಗಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಪ್ರೊ. ವಸಂತಗೀತಾ ಹಿರೇಮಠ ಅವರು, ಬಸವಾದಿ ಶಿವಶರಣರ ವಚನಗಳನ್ನು ಕೇವಲ ವರ್ತಮಾನದ ಅನುಕೂಲಕ್ಕೆ ತಕ್ಕಂತೆ ಬಳಸಿ  ಕೊಳ್ಳುವುದಕ್ಕಿಂತ, ಅವುಗಳ ನಿಜವಾದ ಅಂತರಾರ್ಥವನ್ನು ಅರಿತು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ ಎಂದು ಹೇಳಿದರು. ಶರಣರ ವಚನಗಳು ಕೇವಲ ಧಾರ್ಮಿಕ ಅಥವಾ ಸಾಹಿತ್ಯಿಕ ಅಭಿವ್ಯಕ್ತಿಗಳಲ್ಲ; ಅವು ಸಮಾನತೆ, ಮಾನವೀಯತೆ, ಕಾಯಕ, ದಾಸೋಹ ಮತ್ತು ಸಾಮಾಜಿಕ ನ್ಯಾಯದ ಬದುಕಿನ ಮಾರ್ಗದರ್ಶಕ ತತ್ವಗಳಾಗಿವೆ ಎಂದು ಅವರು ವಿವರಿಸಿದರು.