ದಿವ್ಯಾಂಗರಿಗೆ ಆತ್ಮವಿಶ್ವಾಸದ ಸಂದೇಶ ಸಾರಿದ ಹೆಲೆನ್ ಕೆಲ್ಲರ್ ದಿನಾಚರಣೆ

ದಿವ್ಯಾಂಗರಿಗೆ ಆತ್ಮವಿಶ್ವಾಸದ ಸಂದೇಶ ಸಾರಿದ ಹೆಲೆನ್ ಕೆಲ್ಲರ್ ದಿನಾಚರಣೆ Helen Keller Day Celebration: A Message of Self-Confidence for Persons with Disabilities

ಲೋಕದರ್ಶನ ವರದಿ 

   ಬೆಳಗಾವಿ 29: ಬೆಳಗಾವಿಯ ಸಮರ್ಥನಂ ಅಂಗವಿಕಲರ ಸಂಸ್ಥೆಯಲ್ಲಿ ಹೆಲೆನ್ ಕೆಲ್ಲರ್ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರತಿನಿಧಿ ಅರುಣ್ ಕುಮಾರ್ ಎಂ.ಜಿ. ಮಾತನಾಡಿ, "ದೃಷ್ಟಿ ಹಾಗೂ ಶ್ರವಣ ವೈಕಲ್ಯವನ್ನು ಮೀರಿ ವಿಶ್ವಕ್ಕೆ ಮಾದರಿಯಾದ ಹೆಲೆನ್ ಕೆಲ್ಲರ್ ಅವರ ಜೀವನ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕವಾಗಿದೆ. ಅವರ ಸಾಧನೆ ಮತ್ತು ಸೇವಾ ಮನೋಭಾವವನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು," ಎಂದು ಹೇಳಿದರು.  

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಾ. ರಾಕೇಶ್ ವಾಗೋಮರೆ, "ನಾನು ಇದೇ ಸಮರ್ಥನಂ ಸಂಸ್ಥೆಯಲ್ಲಿ ಶಿಕ್ಷಣ ಪಡೆದು ಇಂದು ಡಾಕ್ಟರೇಟ್ ಪದವಿ ಗಳಿಸಿದ್ದೇನೆ. ನನ್ನ ಯಶಸ್ಸಿಗೆ ಈ ಸಂಸ್ಥೆಯ ಕೊಡುಗೆ ಅಪಾರ. ನನ್ನಂತೆಯೇ ಸಾವಿರಾರು ದಿವ್ಯಾಂಗರ ಬದುಕಿಗೆ ಬೆಳಕು ನೀಡುತ್ತಿರುವ ಸಂಸ್ಥೆ ಇನ್ನಷ್ಟು ಪ್ರಗತಿ ಸಾಧಿಸಲಿ," ಎಂದು ಆಶಿಸಿದರು.  

ಇನ್ನೋರ್ವ ಮುಖ್ಯ ಅತಿಥಿ, ನೇಸರಗಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಪ್ರೊ. ಹರೀಶ್ ಎಚ್‌.ಆರ್‌. ಮಾತನಾಡಿ, "2011ರಿಂದ ಸಮರ್ಥನಂ ಸಂಸ್ಥೆ ದಿವ್ಯಾಂಗ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತಿದೆ. ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ದೊರೆತಿರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಬೇಕು," ಎಂದು ಕರೆ ನೀಡಿದರು.  

ಕಾರ್ಯಕ್ರಮವನ್ನು ರೂಪಾ ಗೊಳಸಂಗಿ ನಿರೂಪಿಸಿದರು. ಶಿವಕುಮಾರ್ ಹಲ್ಯಾಳಿ ಹಾಗೂ ಸಹೋದ್ಯೋಗಿಗಳು ಕಾರ್ಯಕ್ರಮದ ಆಯೋಜನೆಯಲ್ಲಿ ಸಹಕರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಗಣ್ಯರು ಉಪಸ್ಥಿತರಿದ್ದರು.