ಯಶಸ್ವಿನಿ ಯೋಜನೆ ಫಲಾನುಭವಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

ಯಶಸ್ವಿನಿ ಯೋಜನೆ ಫಲಾನುಭವಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ Free health check-up camp for Yashasvini scheme beneficiaries

ಲೋಕದರ್ಶನ ವರದಿ 

 ಗದಗ, ಜು. 4: ಸಹಕಾರ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಗದಗ ಜಿಲ್ಲಾ ಸಹಕಾರ ಯೂನಿಯನ್, ಕೆಸಿಸಿ ಬ್ಯಾಂಕ್, ಧಾರವಾಡ ಹಾಲು ಒಕ್ಕೂಟ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಕೇಂದ್ರ ಸಹಕಾರ ಸಚಿವಾಲಯ ಸ್ಥಾಪನೆಯ ಐದನೇ ವರ್ಷದ ಅಂಗವಾಗಿ ಸಹಕಾರ ಸಪ್ತಾಹ ಆಚರಿಸಲಾಯಿತು.  ಈ ಅಂಗವಾಗಿ ಶನಿವಾರ ಡಂಬಳದ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ‘ಯಶಸ್ವಿನಿ ಯೋಜನೆ’ ಫಲಾನುಭವಿಗಳಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಿವೃತ್ತ ಉಪನ್ಯಾಸಕ ಹಾಗೂ ಪರಿಸರವಾದಿ ಸಿ.ಎಸ್‌. ಅರಸನಾಳ, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ, ಹೆಚ್ಚು ಗಿಡಗಳನ್ನು ನೆಟ್ಟು ಪರಿಸರ ಉಳಿಸುವ ಕಾರ್ಯದಲ್ಲಿ ಎಲ್ಲರೂ ಭಾಗಿಯಾಗಬೇಕು ಎಂದು ಕರೆ ನೀಡಿದರು.  

ವೈದ್ಯಾಧಿಕಾರಿ ಡಾ. ಎಂ.ಎಂ. ಸಜ್ಜನ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವಜನರಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಉತ್ತಮ ಆಹಾರ, ಯೋಗ, ವ್ಯಾಯಾಮ, ಸಮರ​‍್ಕ ನಿದ್ರೆ ಮತ್ತು ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಧೂಮಪಾನ ಹಾಗೂ ಇತರ ದುಶ್ಚಟಗಳಿಂದ ದೂರವಿರಬೇಕೆಂದೂ ಹೇಳಿದರು. ಸಹಕಾರ ಅಭಿವೃದ್ಧಿ ಅಧಿಕಾರಿ ಸಿ.ಕೆ. ಲಮಾಣಿ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯ ಕುರಿತು ಮಾಹಿತಿ ನೀಡಿ, ಸಹಕಾರಿ ಸಂಘಗಳ ಸದಸ್ಯರು ಮತ್ತು ಅವರ ಕುಟುಂಬಗಳಿಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಆರೋಗ್ಯ ಸೇವೆ, ಶಸ್ತ್ರಚಿಕಿತ್ಸೆ ಸೇರಿದಂತೆ ವಿವಿಧ ಚಿಕಿತ್ಸೆಗಳ ಸೌಲಭ್ಯ ಯೋಜನೆಯಡಿ ಲಭ್ಯವಿದೆ ಎಂದು ತಿಳಿಸಿದರು.  

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಮರಿಯಪ್ಪ ಸಿದ್ದಣ್ಣವರ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಶಸ್ವಿನಿ ಯೋಜನೆ ಗ್ರಾಮೀಣ ಜನರಿಗೆ ಉತ್ತಮ ಆರೋಗ್ಯ ಭದ್ರತೆ ಒದಗಿಸುವ ಮಹತ್ವದ ಯೋಜನೆಯಾಗಿದ್ದು, ಎಲ್ಲ ಅರ್ಹ ಸದಸ್ಯರು ಇದರ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.  ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರು, ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ಸಹಕಾರಿ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಆಶಾ ಕಾರ್ಯಕರ್ತೆ ರೇಣುಕಾ ಕರಿಗಾರ ಪ್ರಾರ್ಥಿಸಿದರು. ಯೂನಿಯನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಎಸ್‌. ಕರಿಯಪ್ಪ ಸ್ವಾಗತಿಸಿ, ಸಂಘದ ಮುಖ್ಯ ಕಾರ್ಯನಿರ್ವಾಹಕ ಎಸ್‌.ಎಸ್‌. ಬುಗಟಿ ವಂದಿಸಿದರು.