ವೈಜ್ಞಾನಿಕ ಮನೋಭಾವ ಬೆಳೆಸುವುದು ಸಮಾಜದ ಪ್ರಗತಿಗೆ ಅಗತ್ಯ: ಎಫ್‌.ಸಿ. ಚಿಗರೇಡ್ಡಿ

ವೈಜ್ಞಾನಿಕ ಮನೋಭಾವ ಬೆಳೆಸುವುದು ಸಮಾಜದ ಪ್ರಗತಿಗೆ ಅಗತ್ಯ: ಎಫ್‌.ಸಿ. ಚಿಗರೇಡ್ಡಿ  Fostering a scientific temper is essential for the progress of society: F.C. Chigareddi

ಹಾವೇರಿ, ಆ. 3: ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕತೆ ಸಮಾಜದ ಪ್ರಗತಿಗೆ ಅತ್ಯಗತ್ಯವಾಗಿದ್ದು, ವಿಜ್ಞಾನವನ್ನು ಜನಸಾಮಾನ್ಯರ ಬದುಕಿನ ಭಾಗವಾಗಿಸುವ ಕೆಲಸಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಬಿಜೆವಿಎಸ್ ರಾಜ್ಯ ಉಪಾಧ್ಯಕ್ಷ ಎಫ್‌.ಸಿ. ಚಿಗರೇಡ್ಡಿ ಹೇಳಿದರು.  

ನಗರದ ಗಂಗಾಧರ ನಂದಿ ಜಿಲ್ಲಾ ಕನ್ನಡ ವಿಜ್ಞಾನ ಸಾಹಿತ್ಯ ಪರಿಷತ್ ಭವನದಲ್ಲಿ ಭಾರತ ಜ್ಞಾನ-ವಿಜ್ಞಾನ ಸಮಿತಿಯ ಜಿಲ್ಲಾ ಹಾಗೂ ತಾಲೂಕು ಘಟಕಗಳ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  

ಭಾರತವು ಸಮೃದ್ಧ ವೈಚಾರಿಕ ಪರಂಪರೆಯನ್ನು ಹೊಂದಿದ್ದು, ವಿಜ್ಞಾನವು ಕೇವಲ ತಂತ್ರಜ್ಞಾನವಲ್ಲ, ಸಮಾಜದ ಚಿಂತನೆ ಮತ್ತು ಅಭಿವೃದ್ಧಿಗೆ ದಾರೀದೀಪವಾಗಿದೆ ಎಂದು ಅವರು ಹೇಳಿದರು. ವೈಜ್ಞಾನಿಕ ಚಿಂತನೆ ಬೆಳೆಸುವುದರ ಮೂಲಕ ಸಮಾಜದಲ್ಲಿನ ಮೂಢನಂಬಿಕೆಗಳನ್ನು ನಿವಾರಿಸಿ, ವೈಜ್ಞಾನಿಕ ಮನೋಭಾವವನ್ನು ಜನರಲ್ಲಿ ಮೂಡಿಸಬೇಕೆಂದು ಕರೆ ನೀಡಿದರು.  

ಕಾರ್ಯಕ್ರಮ ಉದ್ಘಾಟಿಸಿದ ಕಸಾಪ ಜಿಲ್ಲಾ ಅಧ್ಯಕ್ಷ ಲಿಂಗಯ್ಯ ಹಿರೇಮಠ ಮಾತನಾಡಿ, ವಿಜ್ಞಾನವು ಜನಜೀವನದ ಅವಿಭಾಜ್ಯ ಅಂಗವಾಗಿದ್ದು, ಅದನ್ನು ಜೀವನ ಮೌಲ್ಯಗಳೊಂದಿಗೆ ಬೆಳೆಸುವ ಅಗತ್ಯವಿದೆ ಎಂದರು.  

ಹಿರಿಯ ಸಾಹಿತಿ ಹನುಮಂತಗೌಡ ಗೊಲ್ಲರ ಮಾತನಾಡಿ, ಸಮಾಜದಲ್ಲಿ ವೈಜ್ಞಾನಿಕ ಮನೋಭಾವ, ವೈಚಾರಿಕತೆ ಮತ್ತು ಸಮಾನತೆಯ ಪ್ರಜ್ಞೆ ಬೆಳೆಯಲು ಜ್ಞಾನ-ವಿಜ್ಞಾನ ಸಮಿತಿಯಂತಹ ಸಂಘಟನೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.  

ಕಸಾಪ ತಾಲೂಕು ಅಧ್ಯಕ್ಷ ವೈ.ಬಿ. ಆಲದಕಟ್ಟಿ ಮಾತನಾಡಿ, ಮಕ್ಕಳಲ್ಲಿ ಪ್ರಶ್ನಿಸುವ ಮನೋಭಾವ ಬೆಳೆಸುವುದು ಶಿಕ್ಷಕರ ಜವಾಬ್ದಾರಿಯಾಗಿದ್ದು, ದೇಶದ ಅಭಿವೃದ್ಧಿಗೆ ವಿಜ್ಞಾನ ಶಿಕ್ಷಣ ಅತ್ಯಂತ ಅಗತ್ಯ ಎಂದರು.