ದುರ್ಗಾದೇವಿ ಮೆರವಣಿಗೆಗೆ ಚಾಲನೆ

ದುರ್ಗಾದೇವಿ ಮೆರವಣಿಗೆಗೆ ಚಾಲನೆ  Flag-off of the Durga Devi procession


ಲಕ್ಷ್ಮೇಶ್ವರ, ಸೆ. 8: ಪಟ್ಟಣದ ಬಸವೇಶ್ವರ ಬಡಾವಣೆಯಲ್ಲಿ ಭೋವಿ ವಡ್ಡರ ಸಮಾಜದ ವತಿಯಿಂದ ಪ್ರತಿವರ್ಷ ಶ್ರಾವಣ ಮಾಸದಲ್ಲಿ ನಡೆಯುವ ಶ್ರೀ ದುರ್ಗಾದೇವಿ ವಿಶೇಷ ಪೂಜೆ ಹಾಗೂ ಭಜನಾ ಕಾರ್ಯಕ್ರಮದ ಅಂಗವಾಗಿ ಮಂಗಳವಾರ ದುರ್ಗಾದೇವಿ ಭಾವಚಿತ್ರದ ಮೆರವಣಿಗೆ ನಡೆಯಿತು.  

ರಾಜ್ಯ ರೈತೋದಯ ಹಸಿರು ಸೇನೆ ರಾಜ್ಯಾಧ್ಯಕ್ಷ ಹಾಗೂ ಭೋವಿ ವಡ್ಡರ ಸಮಾಜದ ಮುಖಂಡ, ಶಿರಹಟ್ಟಿ ಮತಕ್ಷೇತ್ರದ ಸೇವಾಕಾಂಕ್ಷಿ ಬಿ.ಟಿ. ಚಂದ್ರಶೇಖರ ಅವರು ಟ್ರ್ಯಕ್ಟರ್ ಚಾಲನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.  

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶ್ರಾವಣ ಮಾಸವು ಹಿಂದೂಗಳ ಪಾಲಿಗೆ ಅತ್ಯಂತ ಪವಿತ್ರವಾಗಿದ್ದು, ಈ ಮಾಸದಲ್ಲಿ ಭಕ್ತರು ಕಟ್ಟು ನಿಟ್ಟಿನ ವ್ರತಾಚರಣೆ ನಡೆಸಿ, ಮಾಂಸಾಹಾರ ಸೇವಿಸದೆ ಪ್ರತಿದಿನ ಪೂಜೆ, ಪುನಸ್ಕಾರಗಳನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸುತ್ತಾರೆ. ಅದರಂತೆ ಭೋವಿ ಸಮಾಜದವರು ಕೂಡ ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವಿಸದೆ, ದುರ್ಗಾದೇವಿಯನ್ನು ಸ್ಮರಿಸುತ್ತಾ ಭಕ್ತಿಯಿಂದ ಮಾಸಾಚರಣೆ ಮಾಡುತ್ತಿದ್ದಾರೆ ಎಂದರು.  

ಮೆರವಣಿಗೆಯಲ್ಲಿ ಮಹಿಳೆಯರು ಭಜನೆ ಮಾಡುತ್ತಾ ಆರತಿ ಬೆಳಗಿದರು. ಸಮಾಜದ ಮುಖಂಡರು, ಹಿರಿಯರು, ಮಹಿಳೆಯರು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.  ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆ, ಶ್ರಾವಣ ಮಾಸದ ಕೊನೆಯ ಮಂಗಳವಾರದ ಅಂಗವಾಗಿ ಮಹಾಪ್ರಸಾದ ವಿತರಣೆಯೊಂದಿಗೆ ಮುಕ್ತಾಯಗೊಂಡಿತು.