ವಿದ್ಯಾರ್ಥಿಗಳ ಕನಸುಗಳಿಗೆ ಉಜ್ವಲ ದಿಕ್ಕು ತೋರಿದ ಡಾ. ಡಿ.ವಿ. ಗುರುಪ್ರಸಾದ್

Dr. D.V. Guruprasad, who showed a bright direction to the dreams of students

ಲೋಕದರ್ಶನ ವರದಿ 

ವಿದ್ಯಾರ್ಥಿಗಳ ಕನಸುಗಳಿಗೆ ಉಜ್ವಲ ದಿಕ್ಕು ತೋರಿದ ಡಾ. ಡಿ.ವಿ. ಗುರುಪ್ರಸಾದ್ 

ಬೆಳಗಾವಿ 21: ಅಮೃತಕಾಲದಲ್ಲಿ ಯುವಜನತೆಗಾಗಿ ಅನೇಕ ಅವಕಾಶಗಳು ದೊರೆಯುತ್ತಿವೆ. ಇವನ್ನೆಲ್ಲಾ ಬಳಸಿಕೊಳ್ಳಲು ನೀವು ತಯಾರಾಗಿರಬೇಕು ಎಂದು ನಿವೃತ್ತ ಡಿಜಿಪಿ ಡಾ. ಡಿ.ವಿ. ಗುರುಪ್ರಸಾದ್ ಹೇಳಿದರು.  

ನಗರದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುವೆಂಪು ಸಭಾಭವನದಲ್ಲಿ ಮಂಗಳವಾರ ಜರುಗಿದ ಸಂಸ್ಥಾಪನ ದಿನದ ನಿಮಿತ್ತ ಸರಣಿ ಉಪನ್ಯಾಸ ಮಾಲಿಕೆ ಅಮೃತಕಾಲದ ಪಥದಲ್ಲಿ ಅನಂತ ಅವಕಾಶಗಳು ವಿಷಯದ ಕುರಿತಾಗಿ ಮಾತನಾಡಿದರು.  

ಮುಖ್ಯಅತಿಥಿಯಾಗಿ ಪಾಲ್ಗೊಂಡಿದ್ದ ಡಾ. ಡಿ.ವಿ. ಗುರುಪ್ರಸಾದ್ ಅವರು ತಮ್ಮ ಕಾಲೇಜು ದಿನಚರಿ, ಸೋಲುಗಳನ್ನು ಹೇಗೆ ಎದುರಿಸಿದರು, ಯುಪಿಎಸ್‌ಸಿ ತಯಾರಿ ಸೇರಿದಂತೆ ಹಲವಾರು ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಸೃಜನಶೀಲತೆ, ಕೌಶಲ್ಯಾಧಾರಿತ ಜ್ಞಾನ ಮತ್ತು ಉದ್ದೇಶಪೂರಿತ ತೀರ್ಮಾನಗಳು ಭವಿಷ್ಯ ರೂಪಿಸುತ್ತವೆ ಎಂದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. 

ಯಾವುದೇ ಗುರಿಯನ್ನು ಸಾಧಿಸಲು ಆಸಕ್ತಿಯ ಜೊತೆಗೆ ಶ್ರಮ, ನಿರಂತರ ಓದುವ ಅಭ್ಯಾಸ, ಗುರಿಯ ಸ್ಪಷ್ಟತೆ ಮತ್ತು ಹೊಸ ಕೌಶಲ್ಯಗಳ ಅಭ್ಯಾಸ ಅಗತ್ಯ ಎಂದರು. ಇಂದಿನ ವಿದ್ಯಾರ್ಥಿಗಳು ಕೇವಲ ಅಂಕಗಳಿಗಾಗಿ ಓದದೆ, ಶ್ರದ್ಧೆಯಿಂದ ಜ್ಞಾನಕ್ಕಾಗಿ ಓದಿದರೆ, ಬದುಕಿನ ಪಾಠಗಳನ್ನು ಕಲಿತರೆ ದೇಶದ ಉತ್ತಮ ನಾಗರಿಕರಾಗಿ ಬೆಳೆಯಬಹುದು ಎಂದು ಸಲಹೆ ನೀಡಿದರು. 

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜ ಅವರು ಮಾತನಾಡಿ, ವಿದ್ಯೆ ವಿದ್ಯಾರ್ಥಿಗಳಿಗೆ ಬಲ ನೀಡುವಂತಾಗಬೇಕು. ಶೀಘ್ರದಲ್ಲೇ ಎಸ್‌ಸಿ,ಎಸ್‌ಟಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆಯಾಗಲಿದೆ. ಈ ರೀತಿಯ ಎಲ್ಲ ಅವಕಾಶಗಳನ್ನು ವಿದ್ಯಾರ್ಥಿಗಳು ಜಾಣ್ಮೆಯಿಂದ ಬಳಸಿಕೊಳ್ಳಬೇಕು. ಜೀವನದಲ್ಲಿ ಬೆಳವಣಿಗೆಗೆ ಶಿಕ್ಷಣ ಒಂದು ದಾರಿ ಎಂದು ಅಭಿಪ್ರಾಯಪಟ್ಟರು. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವುದು ನಮ್ಮ ಶಿಕ್ಷಕರ ಹೊಣೆಗಾರಿಕೆ. ನಾನಾ ದಾರಿಗಳನ್ನು ತೋರಿಸಿ, ಅವರ ಕೌಶಲ್ಯಗಳನ್ನು ಬೆಳೆಯಲು ಸಹಾಯ ಮಾಡಬೇಕು ಎಂದರು.  

ಇಂದಿನ ಜ್ಞಾನಯುಗದಲ್ಲಿ ವಿದ್ಯಾರ್ಥಿಗಳು ಕೇವಲ ಪಾಠಪುಸ್ತಕಗಳ ಜ್ಞಾನಕ್ಕೆ ಸೀಮಿತರಾಗದೆ, ತಾಂತ್ರಿಕತೆಯ ಬಳಕೆ, ಸಂವಹನ ಕೌಶಲ್ಯ, ಮತ್ತು ನೈತಿಕ ಮೌಲ್ಯಗಳನ್ನು ಅರಿತುಕೊಳ್ಳುವುದು ಅಗತ್ಯವಿದೆ ಎಂದರು. ಇಂದು ವಿದ್ಯಾರ್ಥಿಗಳಿಗೆ ದೊರೆಯುವ ಪ್ರತ್ಯೇಕವಾದ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವುದರ ಜೊತೆಗೆ ಅವರ ಆದರ್ಶಗಳು, ಗುರಿಗಳು ಸ್ಪಷ್ಟವಾಗಿರಬೇಕು. ನಿಮ್ಮ ಜೀವನದಲ್ಲಿ ನಿಷ್ಠೆ, ಪರಿಶ್ರಮ ಮತ್ತು ಶಿಸ್ತು ನಿಮ್ಮನ್ನು ಎತ್ತರಕ್ಕೆ ಕರೆದೊಯ್ಯುತ್ತವೆ, ಎಂದು ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬಿದರು.  

ವಿದ್ಯಾರ್ಥಿಗಳಿಗೆ ಪ್ರೇರಣಾತ್ಮಕ ವಿಡಿಯೋಗಳನ್ನು ತೋರಿಸಲಾಯಿತು. ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಸಂಶೋಧನಾರ್ಥಿಗಳು ಹಾಜರಿದ್ದರು.  

ಗ್ಯಾನಪ್ಪ ಮಾದರ್ ಪ್ರಾರ್ಥಿಸಿದರು. ಪ್ರೊ. ಡಿ.ಎನ್‌. ಪಾಟೀಲ್ ಪರಿಚಯಿಸಿದರು. ಡಾ. ಪ್ರಕಾಶ್ ಕಟ್ಟಿಮಣಿ ನಿರೂಪಿಸಿದರು. ಡಾ. ಸುಶ್ಮಾ ಆರ್‌. ವಂದಿಸಿದರು.