ಮೂತ್ರಪಿಂಡ ಆರೋಗ್ಯ ನಿರ್ಲಕ್ಷಿಸಬೇಡಿ: ಡಾ. ಸವಡಿ
Do not neglect kidney health: Dr. Savadi
ಕೊಪ್ಪಳ 23: ಮೂತ್ರಪಿಂಡದ ಆರೋಗ್ಯದ ಬಗ್ಗೆ ಜನರು ನಿರ್ಲಕ್ಷ್ಯ ವಹಿಸದೆ, ಆರಂಭಿಕ ಹಂತದಲ್ಲೇ ಸಮಸ್ಯೆಗಳನ್ನು ಗುರುತಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಈಶ್ವರ ಸವಡಿ ಸಲಹೆ ನೀಡಿದರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ಶನಿವಾರ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ ಹಾಗೂ ಬೆಂಗಳೂರಿನ ಮಣಿಪಾಲ್ ಹಾಸ್ಪಿಟಲ್ಸ್, ಹಳೆ ವಿಮಾನ ನಿಲ್ದಾಣ ರಸ್ತೆ ಸಹಯೋಗದಲ್ಲಿ ಆಯೋಜಿಸಿದ್ದ ‘ಮೂತ್ರಪಿಂಡ ಕಸಿ: ಶಸ್ತ್ರಚಿಕಿತ್ಸೆಯಾಚೆಗಿನ ಆರೈಕೆ, ತಪ್ಪು ಕಲ್ಪನೆಗಳು ಮತ್ತು ವೈದ್ಯಕೀಯ ವಾಸ್ತವಗಳು’ ಕುರಿತ ಸಮುದಾಯ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮೂತ್ರಪಿಂಡದ ಕಾಯಿಲೆ ಗಂಭೀರ ಹಂತ ತಲುಪುವವರೆಗೆ ಹಲವು ಬಾರಿ ಸ್ಪಷ್ಟ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಆದ್ದರಿಂದ ಮೂತ್ರಪಿಂಡವನ್ನು ಆರೋಗ್ಯವಾಗಿಟ್ಟುಕೊಳ್ಳುವ ವಿಧಾನ, ಆರಂಭಿಕ ಹಂತದಲ್ಲೇ ರೋಗ ಪತ್ತೆ ಮತ್ತು ಅಗತ್ಯವಿದ್ದಾಗ ಲಭ್ಯವಿರುವ ಚಿಕಿತ್ಸಾ ಆಯ್ಕೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಅಗತ್ಯ ಎಂದರು.
ಮಣಿಪಾಲ್ ಆಸ್ಪತ್ರೆಯ ಯುರೋ-ಆಂಕೊಲಜಿ, ರೊಬೋಟಿಕ್ ಸರ್ಜರಿ ಹಾಗೂ ಮೂತ್ರಪಿಂಡ ಕಸಿ ಸಲಹೆಗಾರ ಡಾ. ಆನಂದ್ ಪಾಟೀಲ್ ಮಾತನಾಡಿ, ಮೂತ್ರಪಿಂಡ ವೈಫಲ್ಯದಿಂದ ಬಳಲುವವರಿಗೆ ಡಯಾಲಿಸಿಸ್ ಬಳಿಕ ಮೂತ್ರಪಿಂಡ ಕಸಿ ಹೊಸ ಜೀವನಕ್ಕೆ ಅವಕಾಶ ನೀಡುತ್ತದೆ. ಕಸಿ ಪ್ರಕ್ರಿಯೆಯಲ್ಲಿ ಸೂಕ್ತ ದಾನಿ ಆಯ್ಕೆ, ಹೊಂದಾಣಿಕೆ, ಶಸ್ತ್ರಚಿಕಿತ್ಸೆ ಹಾಗೂ ಕಸಿ ನಂತರದ ಆರೈಕೆ ಪ್ರಮುಖವಾಗಿವೆ. ರೊಬೋಟಿಕ್ ಕಸಿ, ಸ್ವಾಪ್ ಕಸಿ ಮತ್ತು ಮಕ್ಕಳ ಮೂತ್ರಪಿಂಡ ಕಸಿ ಸೇರಿದಂತೆ ಆಧುನಿಕ ಚಿಕಿತ್ಸಾ ವಿಧಾನಗಳು ಲಭ್ಯವಿವೆ ಎಂದರು.
ಮಣಿಪಾಲ್ ಆಸ್ಪತ್ರೆಯ ನೆಫ್ರಾಲಜಿ ಸಲಹೆಗಾರ ಡಾ. ರವಿ ಜಂಗಮಣಿ ಮಾತನಾಡಿ, ಕಸಿ ಪ್ರಕ್ರಿಯೆಯಲ್ಲಿ ದಾನಿಯ ಆರೋಗ್ಯವೂ ಅತ್ಯಂತ ಮುಖ್ಯ. ಮೆದುಳಿನ ಕಾಂಡದ ಸಾವು ಸಂಭವಿಸಿದ ಸಂದರ್ಭದಲ್ಲಿ ಕುಟುಂಬದ ಒಪ್ಪಿಗೆಯೊಂದಿಗೆ ಅಂಗಾಂಗ ದಾನ ಮಾಡಿದರೆ ಹಲವು ಜೀವಗಳನ್ನು ಉಳಿಸಬಹುದು. ಕಸಿ ನಂತರ ನಿಯಮಿತ ತಪಾಸಣೆ, ಓಷಧಿಗಳ ನಿಯಮಿತ ಸೇವನೆ ಹಾಗೂ ಮೂತ್ರಪಿಂಡದ ಆರೋಗ್ಯ ಕಾಪಾಡಿಕೊಳ್ಳುವುದು ಅಗತ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗರಾಜ್ ಆರ್. ಜುಮ್ಮನ್ನವರ್ ಮಾತನಾಡಿ, ಸರ್ಕಾರಿ ನೌಕರರಲ್ಲಿ ಮೂತ್ರಪಿಂಡದ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಸರ್ಕಾರಿ ನೌಕರರ ಹಿತದೃಷ್ಟಿಯಿಂದ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಮಣಿಪಾಲ್ ಆಸ್ಪತ್ರೆಯಲ್ಲಿ ಅನುಷ್ಠಾನಗೊಳಿಸುವಂತೆ ಮನವಿ ಮಾಡಿದರು.
ಭಾರತೀಯ ರೆಡ್‌ಕ್ರಾಸ್‌ನ ರಾಜ್ಯ ಉಪಾಧ್ಯಕ್ಷ ಡಾ. ಶ್ರೀನಿವಾಸ ಹ್ಯಾಟಿ ಮಾತನಾಡಿದರು. ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು, ತಾಲೂಕು ಅಧ್ಯಕ್ಷರು, ನಿರ್ದೇಶಕರು ಹಾಗೂ ವಿವಿಧ ಇಲಾಖೆಗಳ ಸರ್ಕಾರಿ ನೌಕರರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 