ಬೆಂಗಳೂರು, ಜ 28 : ವೇತನ ತಾರತಮ್ಯ, ಪದೋನ್ನತಿ ಸೇರಿ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದ್ವಿತೀಯ ಪಿಯುಸಿ ಮೌಲ್ಯಮಾಪನ ಬಹಿಷ್ಕರಿಸಿ ಪ್ರತಿಭಟನೆ ನಡೆಸಲು ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ನಿರ್ಧರಿಸಿದೆ.
ಉಪನ್ಯಾಸಕರ ಬೇಡಿಕೆ ಕುರಿತಂತೆ ಕಳೆದ ಅಕ್ಟೋಬರ್ ನಲ್ಲಿ ಶಿಕ್ಷಣ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಚಿವರು ವೇತನ ತಾರತಮ್ಯ ನಿವಾರಿಸುವುದಾಗಿ ಭರವಸೆ ನೀಡಿದ್ದರು. ಭರವಸೆ ಇದುವರೆಗೂ ಈಡೇರದ ಕಾರಣ ಈ ವರ್ಷದ ಮೌಲ್ಯಮಾಪನ ಬಹಿಷ್ಕರಿಸಿ ಬೇಡಿಕೆಗಳ ಈಡೇರಿಕೆಗೆ ಹೋರಾಟ ನಡೆಸಲು ನಿರ್ಧರಿಸಿರುವುದಾಗಿ ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಿ.ಯು ಪ್ರಾಂಶುಪಾಲರ ಸಂಘದ ಅಧ್ಯಕ್ಷ ಕೆ.ಟಿ.ಶ್ರೀಕಂಠೇಗೌಡ ಹಾಗೂ ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಈ ವಿಷಯ ತಿಳಿಸಿದರು.
ಕಾಲಮೀತಿಯೊಳಗೆ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿರುವ ಸಂಘ ಜನವರಿ 30 ರಂದು ಫ್ರೀಡಂಪಾರ್ಕ್ ನಲ್ಲಿ ಧರಣಿ ಸತ್ಯಾಗ್ರಹ ಸಹ ಹಮ್ಮಿಕೊಂಡಿದೆ. ಈ ಮೂಲಕ ವೇತನ ತಾರತಮ್ಯ, ಬೋಧನಾ ಅವಧಿ ಮುಂದುವರೆಸುವುದು, ಮೂಲವೇತನಕ್ಕೆ ಎಕ್ಸಗ್ರೇಸಿಯಾ ವಿಲೀನ, ಕಾಲಮಿತಿ ಬಡ್ತಿ, ವಿದ್ಯಾರ್ಥಿಗಳ ಗರಿಷ್ಠ ಸಂಖ್ಯೆಯನ್ನು 40 ಕ್ಕೆ ಮಿತಿಗೊಳಿಸುವುದು, ಕಲಾಮಿತಿ ವೇತನ ಬಡ್ತಿ ಮಂಜೂರು, ಉನ್ನತ ಪದವಿ ಹೊಂದಿರುವ ಉಪನ್ಯಾಸಕರಿಗೆ ಪದವಿ ಕಾಲೇಜಿಗೆ ಮುಂಬಡ್ತಿ, ಆಡಳಿತಾತ್ಮಕ ಸಮಸ್ಯೆಗಳ ಪರಿಹಾರ, ಗಣಿತವಿಷಯಕ್ಕೆ ಆಂತರಿಕ ಅಂಕಗಳನ್ನು ಅಳವಡಿಸುವುದು, ಉಪನ್ಯಾಸಕರ ಕಾಲ್ಪನಿಕ ವೇತನ ಪರಿಹಾರ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಹೋರಾಟ ನಡೆಸಲಾಗುವುದು ಎಂದು ಸರಕಾರಕ್ಕೆ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯಾಧ್ಯಕ್ಷ ವೆಂಕಟೇಶ, ಪ್ರಧಾನ ಕಾರ್ಯದರ್ಶಿ ನಿಂಗೇಗೌಡ, ಕೋಶಾಧ್ಯಕ್ಷ ಜಯಣ್ಣ ಉಪಸ್ಥಿತರಿದ್ದರು.