ವಿಬಿಹಿಜಿ ರಾಮ್‌ಹಿಜಿ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ ಸೂಚನೆ

ವಿಬಿಹಿಜಿ ರಾಮ್‌ಹಿಜಿ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ ಸೂಚನೆ Deputy Secretary Prakash Waddar instructs on the effective implementation of the Vibihi-Ji Ram-Ji sc

ಬರಗಾಲದ ನಡುವೆ ಗ್ರಾಮೀಣರಿಗೆ ನಿರಂತರ ಉದ್ಯೋಗ 

         ವಿಜಯಪುರ  08:  ಜಿಲ್ಲೆಯಲ್ಲಿ ಬರಪರಿಸ್ಥಿತಿ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗದ ಅವಶ್ಯಕತೆ ಹೆಚ್ಚಿರುವುದರಿಂದ, ಅರ್ಹ ಪ್ರತಿಯೊಂದು ಗ್ರಾಮೀಣ ಕುಟುಂಬಕ್ಕೂ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಿ ವಿಬಿಹಿಜಿ ರಾಮ್‌ಹಿಜಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ ಅವರು ಅಧಿಕಾರಿಗಳಿಗೆ  ಸೂಚನೆ ನೀಡಿದರು.  

ತಾಳಿಕೋಟಿ ತಾಲೂಕಿನ ಸಾಸನೂರ, ಹಿರೂರ, ಮೂಕಿಹಾಳ ಹಾಗೂ ಮಿಣಜಗಿ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿದ ಅವರು, ನಡೆಯುತ್ತಿರುವ ವಿವಿಧ ಕಾಮಗಾರಿಗಳು, ಕೂಲಿಕಾರರ ಹಾಜರಾತಿ ಮತ್ತು ಮಾನವ ದಿನಗಳ ಸೃಜನೆಯ ಪ್ರಗತಿ ಪರೀಶೀಲಿಸಿದರು. 

ವಿಬಿಹಿಜಿ ರಾಮ್‌ಹಿಜಿ ಯೋಜನೆಯಡಿ ಪ್ರತಿ ದಿನ 382 ರೂ.  ಕೂಲಿ ಹಾಗೂ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 125 ದಿನಗಳ ಉದ್ಯೋಗಾವಕಾಶ ಕಲ್ಪಿಸಲಾಗುತ್ತಿದ್ದು, ಅರ್ಹ ಕುಟುಂಬಗಳು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು. ಹಿರೂರ ಮತ್ತು ಮಿಣಜಗಿ ಗ್ರಾಮ ಪಂಚಾಯತಿಗಳಲ್ಲಿ ಮಾನವ ದಿನಗಳ ಸೃಜನೆ ಹೆಚ್ಚಿಸಲು ಗ್ರಾಮಗಳಲ್ಲಿ ಡಂಗೂರ ಸಾರುವ ಮೂಲಕ ಹಾಗೂ ಸ್ವ-ಸಹಾಯ ಸಂಘಗಳ ಮೂಲಕ ವ್ಯಾಪಕ ಜಾಗೃತಿ ಮೂಡಿಸಿ, ಉದ್ಯೋಗ ಕೋರಿ ಅರ್ಜಿ ಸಲ್ಲಿಸುವ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ಕೆಲಸ ನೀಡುವಂತೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು. 

ಸಾಸನೂರ ಮತ್ತು ಮೂಕಿಹಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಲುವೆ ಪುನಶ್ಚೇತನ ಹಾಗೂ ಕಂದಕ ನಿರ್ಮಾಣ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿದ ಅವರು, ಕಾರ್ಯನಿರ್ವಹಿಸುತ್ತಿದ್ದ 284 ಕೂಲಿಕಾರ್ಮಿಕರೊಂದಿಗೆ ನೇರವಾಗಿ ಸಂವಾದ ನಡೆಸಿ ಕುಂದು-ಕೊರತೆಗಳನ್ನು ಆಲಿಸಿದರು. ಇದೇ ವೇಳೆ ಶ್ರಮಿಕರನ್ನು ಗೌರವಿಸಿ ಸನ್ಮಾನಿಸಲಾಯಿತು. 

ಆರೋಗ್ಯ ತಪಾಸಣಾ ಶಿಬಿರ: ಮೂಕಿಹಾಳ ಗ್ರಾಮ ಪಂಚಾಯತಿ ಶಿವಪೂರದಲ್ಲಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಶಿಬಿರಕ್ಕೆ ಚಾಲನೆ ನೀಡಿ, ಕೂಲಿಕಾರರಲ್ಲಿ ಜಾಗೃತಿ ಮೂಡಿಸಿದರು. 

ಈ ಭೇಟಿಯ ಸಂದರ್ಭದಲ್ಲಿ ತಾಳಿಕೋಟಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಅನುಸೂಯಾ ಚಲವಾದಿ, ಸಹಾಯಕ ನಿರ್ದೇಶಕ ಪಿ.ಎಸ್‌. ಕಸನಕ್ಕಿ, ಪಿಡಿಓಗಳಾದ ಸವಿತಾ ಗದಗ, ಪಿ.ಎಸ್‌. ಗಾಣಿಗೇರ ಹಾಗೂ ತಾಲೂಕು ಮಟ್ಟದ ತಾಂತ್ರಿಕ ಸಿಬ್ಬಂದಿಗಳು ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.