ಭಾರತ್ ಜೋಡೋ-ಯುವ ಸಂಘಗಳ ರಚನೆಗೆ ಜಿಲ್ಲಾಧಿಕಾರಿ ಸೂಚನೆ

ಭಾರತ್ ಜೋಡೋ-ಯುವ ಸಂಘಗಳ ರಚನೆಗೆ  ಜಿಲ್ಲಾಧಿಕಾರಿ ಸೂಚನೆ Deputy Commissioner directs formation of Bharat Jodo youth associations

ಹಾವೇರಿ 03: ಗ್ರಾಮೀಣ ಹಾಗೂ ನಗರ ಪ್ರದೇಶದ ಯುವಜನರಲ್ಲಿ ಕ್ರೀಡೆ, ಫಿಟ್‌ನೆಸ್, ಆರೋಗ್ಯಕರ ಜೀವನಶೈಲಿ, ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೊಳಿಸಿರುವ ‘ಭಾರತ್ ಜೋಡೋ ಯುವ ಸಂಘ' ಯೋಜನೆಯನ್ನು ಜಿಲ್ಲೆಯಲ್ಲಿ ಸಮರ​‍್ಕವಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್‌ ಹಾಲ್‌ನಲ್ಲಿ ಸೋಮವಾರ  ‘ಭಾರತ್ ಜೋಡೋ ಯುವ ಸಂಘ' ಯೋಜನೆಯ ಅನುಷ್ಠಾನ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಾನ್ಯ ಮುಖ್ಯಮಂತ್ರಿಗಳು ಬಹಳ ಆಸಕ್ತಿಯಿಂದ ಯುವಜನರನ್ನು ಸಮಾಜದ ಮುನ್ನೆಲೆಗೆ ತರಲು ಉತ್ಸುಕರಾಗಿರುತ್ತಾರೆ. ಹಾಗಾಗಿ ನಿಗದಿತ ಸಮಯದೊಳಗೆ ಗ್ರಾಮ ಹಾಗೂ ನಗರ ವಾರ್ಡ್‌ ಮಟ್ಟದಲ್ಲಿ ಭಾರತ್ ಜೋಡೋ ಯುವ ಸಂಘಗಳನ್ನು ರಚಿಸಿ, ಸಂಬಂಧಿತ ಮಾಹಿತಿಯನ್ನು ಆಗಸ್ಟ್‌ 5 ರೊಳಗೆ ಆನ್‌ಲೈನ್‌ನಲ್ಲಿ ಕಡ್ಡಾಯವಾಗಿ ಭರ್ತಿ ಮಾಡುವಂತೆ ಅಧಿಕಾರಿಗಳಿಗೆ  ಸೂಚಿಸಿದರು. 

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಶ್ರೀಮತಿ ಲತಾ ಅವರು,  ಯೋಜನೆಯ ಉದ್ದೇಶ ಹಾಗೂ ಮಾರ್ಗಸೂಚಿಗಳನ್ನು ವಿವರಿಸಿದರು ಹಾಗೂ  ಸಂಬಂಧಪಟ್ಟ  ಇಲಾಖೆ ಅಧಿಕಾರಿಗಳು ‘ಭಾರತ್ ಜೋಡೋ ಯುವ ಸಂಘ' ಯೋಜನೆಯ ಅನುಷ್ಠಾನಕ್ಕೆ ಸಮನ್ವಯದಿಂದ ಕಾರ್ಯನಿರ್ವಹಿಸಿ ಯೋಜನೆ ಯಶಸ್ವಿಗೆ ಸಹಕರಿಸುವಂತೆ ಕೋರಿದರು.  ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಲ್ಜಿತ್‌ಕುಮಾರ,   ಉಪ ಕಾರ್ಯದರ್ಶಿ ಡಾ.ಪುನಿತ್,  ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು, ಸ್ಥಳೀಯ ನಗರ ಸಂಸ್ಥೆಗಳ ಮುಖ್ಯಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ತಿತರಿದ್ದರು.