ರಜಪೂತ ಸಮಾಜದ ಅಭಿವೃದ್ಧಿ ಮಂಡಳಿ ಸ್ಥಾಪನೆಗೆ ಶಿಫಾರಸ್ಸು ಮಾಡುವಂತೆ ಆಗ್ರಹ

ರಜಪೂತ ಸಮಾಜದ ಅಭಿವೃದ್ಧಿ ಮಂಡಳಿ ಸ್ಥಾಪನೆಗೆ ಶಿಫಾರಸ್ಸು ಮಾಡುವಂತೆ ಆಗ್ರಹ  Demand to recommend the establishment of a Rajput community development board

ಲೋಕದರ್ಶನ ವರದಿ 

ಕಂಪ್ಲಿ 29 : ಕರ್ನಾಟಕದಲ್ಲಿ ರಜಪೂತ ಸಮಾಜವು ಆರ್ಥಿಕ, ಶೈಕ್ಷಣಿಕ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ತೀವ್ರವಾಗಿ ಹಿಂದುಳಿದಿದ್ದು, ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ರಾಜ್ಯದಲ್ಲಿ 'ರಜಪೂತ ಅಭಿವೃದ್ಧಿ ಮಂಡಳಿ ಸ್ಥಾಪಿಸಲು ಸರ್ಕಾರದ ಮಟ್ಟದಲ್ಲಿ ಶಿಫಾರಸು ಮಾಡುವಂತೆ ಆಗ್ರಹಿಸಿ, ಕಂಪ್ಲಿ ರಜಪೂತ್ ಸಮಾಜದವರು ಪಟ್ಟಣದ ತಹಶೀಲ್ದಾರ್ ಕಛೇರಿಯಲ್ಲಿ ತಹಶೀಲ್ದಾರ್ ಜೂಗಲ್ ಮಂಜುನಾಯಕಗೆ ಸೋಮವಾರ ಮನವಿ ಪತ್ರ ಸಲ್ಲಿಸಿದರು. ನಂತರ ಅಧ್ಯಕ್ಷ ಕೆ.ಇಂದ್ರಜೀತ್ ಸಿಂಗ್ ಮಾತನಾಡಿ, ರಾಜ್ಯದಲ್ಲಿ ಸುಮಾರು 15 ರಿಂದ 18 ಲಕ್ಷ ರಜಪೂತ ಸಮಾಜದ ಜನರಿದ್ದಾರೆ.

ಇಲ್ಲಿತನಕ ಸಮಾಜಕ್ಕೆ ಸರ್ಕಾರದ ವಿಶೇಷ ಅನುದಾನ ಮತ್ತು ಕಾಳಜಿ ಸಿಗದೇ, ಸಮಾಜವು ಇಂದಿಗೂ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತಿಲ್ಲ. ರಾಜ್ಯದಲ್ಲಿರುವ ರಜಪೂತ ಬಾಂಧವರು ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಮುಂಚೂಣಿಗೆ ಬರಲು ಒಂದು ಪ್ರತ್ಯೇಕ ಅಭಿವೃದ್ಧಿ ಮಂಡಳಿಯ ಅಗತ್ಯ ಅತ್ಯಂತ ಅನಿವಾರ್ಯವಾಗಿದೆ. ಆದ್ದರಿಂದ ಕೂಡಲೇ ರಜಪೂತ ಅಭಿವೃದ್ಧಿ ಮಂಡಳಿ ಸ್ಥಾಪಿಸಲು ಸರ್ಕಾರದ ಮಟ್ಟದಲ್ಲಿ ಶಿಫಾರಸ್ಸು ಮಾಡಿ, ಅಧಿಕೃತವಾಗಿ ಘೋಷಿಸಬೇಕು. ಇದೇ ವಿಷಯಕ್ಕೆ ಸಂಬಂಧಿಸಿದಂತೆ. ಈಗಾಗಲೇ ಕಲಬುರಗಿ ಜಿಲ್ಲಾಡಳಿತದ ಉಸ್ತುವಾರಿಯಲ್ಲಿ ರಜಪೂತ ಸಮಾಜದ ಕೌಟುಂಬಿಕ ಸಮೀಕ್ಷೆ ಹಾಗೂ ಡಿಜಿಟಲ್ ನೋಂದಣಿ ಪ್ರಕ್ರಿಯೆಯು ಅತ್ಯಂತ ಯಶಸ್ವಿಯಾಗಿ ನಡೆದಿದ್ದು.

ಸದರಿ ಸಮಗ್ರ ದತ್ತಾಂಶಗಳ ವರದಿಯು ಬೆಂಗಳೂರಿನಲ್ಲಿರುವ ಮಾನ್ಯ ಹಿಂದುಳಿದ ವರ್ಗಗಳ ಕಲ್ಯಾಣ ಆಯೋಗದ ಪರೀಶೀಲನೆಯಲ್ಲಿದೆ. ಈ ಮಹತ್ವದ ಅಭಿಯಾನದ ಮೂಲಕ ಇಡೀ ರಾಜ್ಯದ ರಜಪೂತ ಸಮಾಜದ ಬಂಧುಗಳು ಒಗ್ಗಟ್ಟಾಗುತ್ತಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಆರಂಭವಾಗಿರುವ ಈ ಪ್ರಕ್ರಿಯೆಗೆ ಪೂರಕವಾಗಿ ಈಗ ನಮ್ಮ ಕಂಪ್ಲಿ ತಾಲ್ಲೂಕಿನ ರಜಪೂತ ಬಾಂಧವರೂ ಸಹ ಧ್ವನಿಗೂಡಿಸುತ್ತಿದ್ದೇವೆ. ಆದ್ದರಿಂದ. ನಮ್ಮ ಸಮಾಜದ ಸಮಗ್ರ ಅಭಿವೃದ್ಧಿಗಾಗಿ 'ರಜಪೂತ ಅಭಿವೃದ್ಧಿ ಮಂಡಳಿ" ಯನ್ನು ತಕ್ಷಣವೇ ಸ್ಥಾಪಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಜಮನ್ ಸಿಂಗ್, ಪೃಥ್ವಿ ರಾಜಸಿಂಗ್, ಪಾನ್ ಸಿಂಗ್, ವಿನಯಸಿಂಗ್, ಮಾನ್ ಸಿಂಗ್, ವಿಶ್ವನಾಥ ಸಿಂಗ್, ತುಕಾರಾಂ ಸಿಂಗ್, ಗಣಪತಿಸಿಂಗ್, ಲಕ್ಷ್ಮಣ ಸಿಂಗ್ ಇದ್ದರು.