ಮೌಲಾನಾ ಆಜಾದ್ ಶಾಲೆಗೆ ಮೂಲಸೌಕರ್ಯಕ್ಕೆ ಆಗ್ರಹ

ಮೌಲಾನಾ ಆಜಾದ್ ಶಾಲೆಗೆ ಮೂಲಸೌಕರ್ಯಕ್ಕೆ ಆಗ್ರಹ  Demand for infrastructure at Maulana Azad School


ಕೊಪ್ಪಳ 23:  ನಗರದ ಸರ್ದಾರ್ ಗಲ್ಲಿಯಲ್ಲಿರುವ ಮೌಲಾನಾ ಆಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆಗೆ ಸ್ವಂತ ಕಟ್ಟಡ ಹಾಗೂ ಅಗತ್ಯ ಮೂಲಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಶಾಲಾ ಕಾಲೇಜುಗಳ ಹಿತರಕ್ಷಣಾ ಹೋರಾಟ ಸಮಿತಿ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳು ಶನಿವಾರ ಮಳೆಯಲ್ಲೇ ಪ್ರತಿಭಟನೆ ನಡೆಸಿ ಶಾಸಕ ಕೆ. ರಾಘವೇಂದ್ರ ಬಿ. ಹಿಟ್ನಾಳ ಅವರಿಗೆ ಮನವಿ ಸಲ್ಲಿಸಿದರು.  

ಶಾಸಕರ ಭೇಟಿಗಾಗಿ ಪ್ರವಾಸಿ ಮಂದಿರದಲ್ಲಿ ಸುಮಾರು ಮೂರೂವರೆ ಗಂಟೆ ಕಾದ ಪ್ರತಿಭಟನಾಕಾರರು, ಶಾಸಕರು ಆಗಮಿಸುತ್ತಿದ್ದಂತೆ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮನವಿ ಸ್ವೀಕರಿಸಿದ ಶಾಸಕ ಹಿಟ್ನಾಳ, ಆ.28ರಂದು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಸಭೆ ಕರೆದು ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳುವುದಾಗಿ ಭರವಸೆ ನೀಡಿದರು.  

ಶಾಲೆಗೆ ತಕ್ಷಣ ಭೂಮಿ ಕಾಯ್ದಿರಿಸಿ ಸುಸಜ್ಜಿತ ಕಟ್ಟಡ ನಿರ್ಮಿಸಬೇಕು. ಎಲ್‌ಕೆಜಿ ತರಗತಿ ಆರಂಭಿಸಿ ಹಂತ ಹಂತವಾಗಿ ಪಿಯುಸಿ ಹಾಗೂ ತಾಂತ್ರಿಕ ಕೋರ್ಸ್‌ಗಳವರೆಗೆ ಮೇಲ್ದರ್ಜೆಗೇರಿಸಬೇಕು. ಖಾಯಂ ಮುಖ್ಯೋಪಾಧ್ಯಾಯರು ಹಾಗೂ ವಿಷಯವಾರು ಶಿಕ್ಷಕರನ್ನು ನೇಮಿಸುವುದರ ಜೊತೆಗೆ ಡಿಇಒ ಮತ್ತು ಜವಾನ ಹುದ್ದೆಗಳನ್ನು ಸೃಷ್ಟಿಸಿ ಭರ್ತಿ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.  

ಅಲ್ಲದೆ ಆಟದ ಮೈದಾನ, ಪ್ರತ್ಯೇಕ ಶೌಚಾಲಯ, ಶುದ್ಧ ಕುಡಿಯುವ ನೀರು, ವಿಜ್ಞಾನ ಪ್ರಯೋಗಾಲಯ ಹಾಗೂ ಗ್ರಂಥಾಲಯ ಸೇರಿದಂತೆ ಅಗತ್ಯ ಮೂಲಸೌಕರ್ಯ ಒದಗಿಸಬೇಕು. ಶೈಕ್ಷಣಿಕ ವರ್ಷದ ಆರಂಭದಲ್ಲೇ ವಿದ್ಯಾರ್ಥಿಗಳಿಗೆ ಉಚಿತ ಶೂ ಮತ್ತು ಸಮವಸ್ತ್ರ ವಿತರಿಸಬೇಕು ಎಂದು ಆಗ್ರಹಿಸಿದರು.  

2017ರಲ್ಲಿ ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ಬಡ ವಿದ್ಯಾರ್ಥಿಗಳಿಗೆ ಉಚಿತ ಆಂಗ್ಲ ಮಾಧ್ಯಮ ಶಿಕ್ಷಣ ನೀಡುವ ಉದ್ದೇಶದಿಂದ ಶಾಲೆ ಮಂಜೂರಾಗಿತ್ತು. ಆದರೆ ದಶಕ ಸಮೀಪಿಸುತ್ತಿದ್ದರೂ ಸ್ವಂತ ಕಟ್ಟಡವಿಲ್ಲದೆ, ಚಿಕ್ಕ ಕೊಠಡಿಗಳಲ್ಲೇ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವುದರಿಂದ ತೊಂದರೆಯಾಗುತ್ತಿದೆ. ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ನಿಯೋಗ ಮನವಿ ಮಾಡಿತು.  

ಈ ಸಂದರ್ಭದಲ್ಲಿ ಎಸ್‌.ಎ. ಗಫಾರ್, ಮುನೀರ್ ಅಹ್ಮದ್ ಸಿದ್ದೀಕಿ, ಮಖಬೂಲ್ ರಾಯಚೂರು, ಮೌಲಾ ಹುಸೇನ್ ಹಣಗಿ, ಚನ್ನಬಸಪ್ಪ ಅಪ್ಪಣ್ಣವರ್, ಗೂಳಪ್ಪ ಹಲಗೇರಿ, ಗವಿಸಿದ್ದಪ್ಪ ಕರಡಿ, ಅಮ್ಜದ್ ಪಟೇಲ್, ಅಕ್ಬರ್ ಪಾಷಾ ಪಲ್ಟನ್ ಸೇರಿದಂತೆ ಮುಖಂಡರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.