ಬೆಳೆ ಹಾನಿ ಸಮೀಕ್ಷೆ ತ್ವರಿತವಾಗಿ ಪೂರ್ಣಗೊಳಿಸಿ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್
Complete the crop damage survey quickly: Deputy Commissioner C.N. Sridhar
ಲೋಕದರ್ಶನ ವರದಿ
ಜಿಲ್ಲೆ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ
ಗದಗ, ಜು.8: ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಬೆಳೆಗಳಿಗೆ ಉಂಟಾಗಿರುವ ಹಾನಿಯ ಸಮೀಕ್ಷೆಯನ್ನು ತ್ವರಿತವಾಗಿ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜುಲೈ 15ರ ನಂತರವೂ ಮಳೆಯ ಕೊರತೆ ಮುಂದುವರಿದರೆ ಅನೇಕ ಪ್ರದೇಶಗಳಲ್ಲಿ ಮರು ಬಿತ್ತನೆಗೆ ಅವಕಾಶ ಕಡಿಮೆಯಾಗಲಿದೆ. ಬಿತ್ತನೆ ಆಗದ ಪ್ರದೇಶಗಳಲ್ಲಿ ಕಡಿಮೆ ಅವಧಿಯ ಪರ್ಯಾಯ ಬೆಳೆಗಳ ಕುರಿತು ರೈತರಿಗೆ ಕೃಷಿ ಇಲಾಖೆ ತಕ್ಷಣ ತಾಂತ್ರಿಕ ಮಾರ್ಗದರ್ಶನ ಹಾಗೂ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಕೆಲವು ಕಡೆ ಸುರಿದಿರುವ ಸಾಧಾರಣ ಮಳೆಯಿಂದ ರೈತರಲ್ಲಿ ಆಶಾಭಾವನೆ ಮೂಡಿದರೂ, ಹಲವೆಡೆ ಬೆಳೆಗಳ ಸ್ಥಿತಿ ಆತಂಕಕಾರಿಯಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ ಶೇ.20ರಿಂದ 30ರಷ್ಟು ಪ್ರದೇಶಗಳಲ್ಲಿ ಮಾತ್ರ ಬೆಳೆಗಳು ಸಮರ್ಕವಾಗಿ ಬೆಳೆಯುತ್ತಿವೆ. ಉಳಿದ ಪ್ರದೇಶಗಳಲ್ಲಿ ಮಳೆಯ ಕೊರತೆಯಿಂದ ಬೆಳೆಗಳು ಬಾಡುತ್ತಿವೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ರೈತರಿಗೆ ರಸಗೊಬ್ಬರ ವಿತರಣೆಯಲ್ಲಿ ಯಾವುದೇ ತೊಂದರೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು. ಅಗತ್ಯಕ್ಕೆ ತಕ್ಕಂತೆ ರಸಗೊಬ್ಬರ ಸಂಗ್ರಹವನ್ನು ಮುಂಚಿತವಾಗಿ ಸಿದ್ಧಪಡಿಸಿಕೊಳ್ಳುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಬೆಳೆ ವಿಮೆ ಮತ್ತು ‘ಆಪ್ಟ್-ಓಟ್’ ಕುರಿತು ಚರ್ಚೆ
ಬೆಳೆ ವಿಮೆ ಸೌಲಭ್ಯ ಹೆಚ್ಚು ರೈತರಿಗೆ ತಲುಪುವಂತೆ ಕ್ರಮ ಕೈಗೊಳ್ಳಬೇಕು. ‘ಆಪ್ಟ್-ಓಟ್’ ಆಯ್ಕೆಯ ಕುರಿತು ರೈತರಿಗೆ ಸಮರ್ಕ ಮಾಹಿತಿ ನೀಡಿ, ವಿಮಾ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಜಿಲ್ಲೆಯ ಎಲ್ಲ ತಹಶೀಲ್ದಾರರು ಹಾಗೂ ಸಂಬಂಧಿತ ಅಧಿಕಾರಿಗಳು ಬೆಳೆ ಹಾನಿ ಸಮೀಕ್ಷೆಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ಈ ಕಾರ್ಯದಲ್ಲಿ ಯಾವುದೇ ನಿರ್ಲಕ್ಷ್ಯ ಸಹಿಸಲಾಗುವುದಿಲ್ಲ ಎಂದು ಎಚ್ಚರಿಸಿದರು.
ಕುಡಿಯುವ ನೀರು ಮತ್ತು ವಿದ್ಯುತ್ ಸಮಸ್ಯೆಗಳಿಗೆ ಆದ್ಯತೆ
ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಯಿತು. ಬೋರ್ವೆಲ್, ಶುದ್ಧ ಕುಡಿಯುವ ನೀರಿನ ಘಟಕಗಳು ಮತ್ತು ನೀರಿನ ಮೂಲಗಳ ಮಾಹಿತಿ ಪಡೆದು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಮಳೆ ಹಾಗೂ ಗಾಳಿಯಿಂದ ಹಾನಿಗೊಳಗಾದ ವಿದ್ಯುತ್ ಕಂಬಗಳು ಮತ್ತು ತಂತಿಗಳನ್ನು ತಕ್ಷಣ ದುರಸ್ತಿಪಡಿಸಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ವಿವಿಧ ಇಲಾಖೆಗಳ ಅಧಿಕಾರಿಗಳು, ತಹಶೀಲ್ದಾರರು ಹಾಗೂ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಹಿಡಕಲ್ ಜಲಾಶಯದ ನೀರಿನಲ್ಲಿ ವೃದ್ದೆಯ ಶವ ಪತ್ತೆ : ಹಳೇಗುಡನಟ್ಟಿ ಬಳಿ ಘಟನೆ
ಡ್ರಗ್ ಅವೇರ್ನೆಸ್ ವೀಕ್: ಆಚರಣೆ, ಕಾರ್ಯಾಚರಣೆ 12.38 ಲಕ್ಷ ಮಾಕದ ವಶ, 16 ಪ್ರಕರಣ ದಾಖಲು, 4 ಬಂಧನ
ರಾಜ್ಯ ನೇಕಾರರ ಸಂಘದಿಂದ ನಾಳೆ ಬೆಳಗಾವಿ ಚಲೋ ಕಾರ್ಯಕ್ರಮ : ಸಿಎಂ ಮುಂದೆ ಬೇಡಿಕೆಗಳ ಪಟ್ಟಿ
ಕ್ರಿಕೇಟಿಗ್ ಧೋನಿ ಬೆಳಗಾವಿಗೆ ಕರೆಸಿ : ವಿದ್ಯಾರ್ಥಿಗಳಿಂದ ಡಿಸಿಗೆ ವಿಭಿನ್ನ ಮನವಿ
ಮಳೆಯಿಂದ ಕಾರಲಗಾ ಗ್ರಾಮ ಜಲಾವೃತ; ವಿದ್ಯಾರ್ಥಿಗಳ ಪರದಾಟ : ಶಾಲಾ ಕಾಲೇಜುಗಳಿಗೆ ರಜೆ
ಆಲಂದಿಯಲ್ಲಿ ಪ್ರವಾಹ: ಭಾರೀ ಮಳೆಯಿಂದ ಇಂದ್ರಾಯಣಿ ನದಿ ಉಕ್ಕಿ ಹರಿದು ಸೇತುವೆಗಳು ಮುಚ್ಚಲ್ಪಟ್ಟವು; ನದಿತೀರ ಪ್ರದೇಶಗಳು ಜಲಾವೃತ 