ಹಿಂದೂ ರುದ್ರ ಭೂಮಿಯಲ್ಲಿ ಅವ್ಯವಸ್ಥೆ ದೂರು: ಪೌರಾಯುಕ್ತ ವಿವೇಕ್ ಬನ್ನೆ ಪರೀಶೀಲನೆ
ಲೋಕದರ್ಶನ ವರದಿ
ದಾಂಡೇಲಿ 06: ದಾಂಡೇಲಿಯ ಪಟೇಲ ನಗರದ ಹಿಂದೂ ರುದ್ರ ಭೂಮಿಯಲ್ಲಿ ಅವ್ಯವಸ್ಥೆ ಇದೆ ಎಂಬ ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ನಗರಸಭೆ ಪೌರಾಯುಕ್ತ ವಿವೇಕ್ ಬನ್ನೆಯವರು ಸಿಬ್ಬಂದಿಯೊಂದಿಗೆ ಬುಧವಾರ ಸ್ಥಳಕ್ಕೆ ಭೆೇಟಿ ನೀಡಿ ಪರೀಶೀಲನೆ ನಡೆಸಿದರು. ಪರೀಶೀಲನೆ ವೇಳೆ ರುದ್ರಭೂಮಿಯಲ್ಲಿನ ಚಿತಾಗಾರದ ಅವ್ಯವಸ್ಥೆಯನ್ನು ತಕ್ಷಣ ಸರಿ ಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ರಾತ್ರಿ ವೇಳೆಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ವಿದ್ಯುತ್ ದೀಪಗಳನ್ನು ಅಳವಡಿಸುವ ಕಾರ್ಯಕ್ಕೆ ಸಿಬ್ಬಂದಿಯಿಂದ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ರುದ್ರಭೂಮಿಯಲ್ಲಿನ ನೀರಿನ ವ್ಯವಸ್ಥೆ ಸೇರಿದಂತೆ ಅಗತ್ಯವಿರುವ ಎಲ್ಲ ಮೂಲಭೂತ ಸೌಕರ್ಯಗಳನ್ನು ತ್ವರಿತವಾಗಿ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವದು ಎಂದು ಪೌರಾಯುಕ್ತರು ತಿಳಿಸಿದರು. ಸ್ಥಳೀಯ ಅಹವಾಲುಗಳಿಗೆ ಸ್ಪಂದಿಸಿ ನಗರಸಭೆ ತಕ್ಷಣವೇ ಪರೀಶೀಲನೆ ನಡೆಸಿರುವದು ಸಾರ್ವಜನಿಕರಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.