ಸಾಮಾನ್ಯ ರಂಗಭೂಮಿಗಿಂತ ಮಕ್ಕಳ ರಂಗಭೂಮಿ ಕಠಿಣ

ಕೆ. ವ್ಹಿ. ಸಾಲಿಮಠ ಅಭಿಮತ: ಮಕ್ಕಳ ರಂಗತರಂಗ ತರಬೇತಿ ಶಿಬಿರ ಉದ್ಘಾಟನೆ 

ಗದಗ 27: ಸಮಾಜದ ನ್ಯೂನ್ಯತೆಯನ್ನು ತಿದ್ದಿತಿಡುವಲ್ಲಿ ರಂಗ ಕಲೆ ಪ್ರೇರಕವಾಗಿದೆ. ಮಕ್ಕಳ ವೈವಿಧ್ಯಮಯ ಪ್ರತಿಭೆಗೆ ನಾಟಕ ಕಲೆ ಒಂದು ಉತ್ತಮ ಶಿಕ್ಷಣವಾಗಿದೆ. ಬುದ್ದಿ ಬೆಳೆದ ತರಬೇತಿ ಹೊಂದಿದವರಿಗೆ ರಂಗ ತರಬೇತಿ ನೀಡುವುದು ಸುಲಭ ಆದರೆ ಮಕ್ಕಳನ್ನು ತಿದ್ದಿ ತಿಡುವುದು ಕಷ್ಟಸಾಧ್ಯ ಆದ್ದರಿಂದ ಸಾಮಾನ್ಯ ರಂಗಭೂಮಿಗಿಂತ ಮಕ್ಕಳ ರಂಗಭೂಮಿ ಬಹುಕಠಿಣವಾಗಿದೆ. ಇಂತಹ ಮಕ್ಕಳನ್ನು ತರಬೇತಿಗೊಳಿಸುವಲ್ಲಿ ನಿರತರಾದ ಬಾಲವಿಕಾಸ ಅಕಾಡೆಮಿ ಧಾರವಾಡ ಹಾಗೂ ನಿರ್ಮಲ ಸೇವಾ ಸಂಸ್ಥೆಯ ಮುಂಡರಗಿಯ ಕಾರ್ಯ ಶ್ಲಾಘನೀಯ ಎಂದು ಆದರ್ಶ ವಿದ್ಯಾಲಯ ಇಟಗಿ ಮುಖ್ಯೋಪಾಧ್ಯಾಯರಾದ ಕೆ. ವ್ಹಿ. ಸಾಲಿಮಠ ಹೇಳಿದರು.

ಕರ್ನಾಟಕ ಬಾಲವಿಕಾಸ ಅಕಾಡೆಮಿ ಧಾರವಾಡ, ನಿರ್ಮಲ ವಿವಿಧೋದ್ದೇಶಗಳ ಸೇವಾ ಸಂಸ್ಥೆ ಮುಂಡರಗಿ, ಆದರ್ಶ ವಿದ್ಯಾಲಯ ಇಟಗಿ, ನವರಸ ಕಲಾಸಂಘ ಬೆಟಗೇರಿ, ನಯನತಾರ ಕಲಾಸಂಘ ಬೆಟಗೇರಿ ಇವುಗಳ ಸಹಯೋಗದಲ್ಲಿ ಆದರ್ಶ ವಿದ್ಯಾಲಯದ ಇಟಗಿಯಲ್ಲಿ ವಿಶ್ವರಂಗಭೂಮಿ ದಿನಾಚರಣೆ ನಿಮಿತ್ತ ಮಕ್ಕಳ ರಂಗತರಂಗ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತ್ತ ಪಠ್ಯಕ್ರಮದಲ್ಲಿ ಬರುವ ಎಲ್ಲಾ ಭಾಷೆಯ ಕಥೆ, ಕವನಗಳನ್ನು ಹಾಗೂ ನಾಟಕಗಳನ್ನು ಮಕ್ಕಳಿಗೆ ರಂಗ ರೂಪದ ಮೂಲಕ ವ್ಯಕ್ತಪಡಿಸಿದರೆ ಮಕ್ಕಳ ಸುಲಭ ಕಲಿಕೆಗೆ ಪ್ರೇರಕವಾಗುತ್ತದೆ ಎಂಬುದನ್ನು ನಮ್ಮ ಶಾಲೆಯ ಸಿಬ್ಬಂದಿಗಳು ನಿರೂಪಿಸಿದ್ದಾರೆ. ಇಂತಹ ಪ್ರಯೋಗಾತ್ಮಕ ಕ್ರಿಯಾಶೀಲ, ಸೃಜನಶೀಲ ಚಟುವಟಿಕೆಗಳು ಎಲ್ಲಾ ಶಾಲೆಗಳಲ್ಲಿ ನಡೆಯಬೇಕು.

ಬದುಕಿನ ಸತ್ವವನ್ನು ನಾವು ಜನಪದ ರಂಗರೂಪದ ಮೂಲಕ ಕಟ್ಟಿಕೊಳ್ಳಬಹುದು ನಮ್ಮ ಸಂಸ್ಕೃತಿ, ಸಾಂಪ್ರದಾಯ, ನಮ್ಮ ನಿತ್ಯ ಬದುಕಿನ ರೂಪವನ್ನು ನಟನೆಯ ಮುಖಾಂತರ ಅಭಿವ್ಯಕ್ತಿಸುವ ಕಲೆಯೇ ರಂಗಕಲೆ ಎಂದು ಶ್ಲಾಘನೀಯ ಮಾತುಗಳನ್ನಾಡಿದರು. 

ಇನ್ನೊರ್ವ ಅತಿಥಿಗಳಾದ ಜನಪದ ಕಲಾವಿದರಾದ ಗವಿಸಿದ್ದಯ್ಯ ಹಳ್ಳಿಕೇರಿಮಠ ಮಾತನಾಡಿ ರಂಗಕಲೆ ನಮ್ಮ ವ್ಯಕ್ತಿತ್ವ ಬದಲಾವಣೆಗೆ ಆದರ್ಶ ಪ್ರತಿಭೆಗೆ ಹಾಗೂ ಪ್ರಗತಿಗೆ ಶಕ್ತಿಯುತವಾದ ಮಾಧ್ಯಮವಾಗಿದೆ ಅಂತಹ ಕಲೆಗಳನ್ನು ಮಕ್ಕಳಿಗೆ ನೀಡುವುದರಿಂದ ಮಕ್ಕಳ ಬೌದ್ಧಿಕ ವಿಕಾಸವಾಗುತ್ತದೆ. ನಾಟಕ ಕಲೆ, ವಿಲಾಸಕಲ್ಲ ವಿಕಾಸಕ್ಕೆ ಎಂದು ಮಾತನಾಡುತ್ತ ರಂಗಕಲೆಯ ಮೂಲ ಸ್ವರೂಪ ಜನಪದ ಹಾಗೂ ಜನಪದರಿಂದ ಬಂದಿರುವಂತಹದ್ದು ಜನಪದಕ್ಕೆ ತನ್ನದೆ ಶಕ್ತಿ ಸಾಮರ್ಥ್ಯವನ್ನು ಹೊಂದಿದೆ ಅದರಂತೆ ರಂಗಕಲೆಯು ಸಹ ಅಪಾರ ಅಸ್ತಿತ್ವವನ್ನು ಹೊಂದಿದೆ. ಆದರೆ ಇಂದಿನ ಆಡಂಬರ ಹಾಗೂ ಆತುರದ ನಿರ್ಧಾರದಿಂದ ಜನಪದ ರಂಗಭೂಮಿಯ ಮೂಲ ಸ್ವರೂಪ ಬದಲಾಗಿ ಸರಳೀಕರಣದಿಂದ ಸತ್ವವನ್ನು ಕಳೆದುಕೊಳ್ಳುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು. 

ನಿರ್ಮಲಾ ವಿವಿಧೋದ್ದೇಶಗಳ ಸೇವಾ ಸಂಸ್ಥೆ ಮುಂಡರಗಿ ಅಧ್ಯಕ್ಷರಾದ ನಿರ್ಮಲ ತರವಾಡೆ, ಕವಿ ಕಲಾವಿದ ಶಿಕ್ಷಕರಾದ ವಿನಾಯಕ ಕಮತರ, ಎನ್. ಎಂ. ಅಂಗಡಿ, ಕುಮಾರಸ್ವಾಮಿ ಎಂ., ಎಲ್. ಎಫ್. ಕೋಲಕಾರ, ಶಬಾನಾ ಪಿಂಜಾರ, ಪಿ. ಬಿ. ಪತ್ತಾರ, ಪರಶುರಾಮ ತಳವಾರ, ಸುನೀಲಕುಮಾರ ನಾಯಕರ, ಶ್ರೀಮತಿ ಚೌಕಿಮಠ, ಶಕುಂತಲಾ ಗೌಡರ, ಮನೋಹರ ಕುಂಬಾರ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಶಿಕ್ಷಕರಾದ ಮಂಜಪ್ಪ ಎಸ್ ಆರ್. ಸ್ವಾಗತಿಸಿದರು. ರಂಗ ನಿರ್ದೇಶಕ ಬಸವರಾಜ ನೆಲಜೇರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಎಂ. ಜಿ. ಹಿರೇಮಠ ವಂದಿಸಿದರು. ಎಂ. ಆರ್. ಮಗದುಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳು ಹಾಗೂ ವಿದ್ಯಾರ್ಥಿ ವೃಂದ, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.