ಸಪ್ತಪದಿ ಸಾಮೂಹಿಕ ವಿವಾಹ ಯೋಜನೆಗೆ ಮುಖ್ಯಮಂತ್ರಿ ಚಾಲನೆ
ಬೆಂಗಳೂರು, ಜ.10 ಮುಜರಾಯಿ ಮತ್ತು ಧಾರ್ಮಿಕ ಇಲಾಖೆ ವತಿಯಿಂದ ನಡೆಯಲಿರುವ ಸರ್ಕಾರದ ವತಿಯಿಂದಲೇ ಬಡವರ ಮದುವೆಗೆ ಪ್ರೋತ್ಸಾಹ ನೀಡುವ ಸಪ್ತಪದಿ ಸಾಮೂಹಿಕ ವಿವಾಹ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಧಾನಸೌಧದಲ್ಲಿ ಶುಕ್ರವಾರ ಚಾಲನೆ ನೀಡಿ ಸಪ್ತಪದಿ ಸಾಮೂಹಿಕ ವಿವಾಹದ ಲಾಂಛನ , ಕರಪತ್ರ ಬಿಡುಗಡೆ ಮಾಡಿದರು.
ಮುಂಬರುವ ಏಪ್ರಿಲ್ 26ರಂದು ಸರ್ಕಾರದಿಂದ ಮೊದಲ ಸಾಮೂಹಿಕ ವಿವಾಹ ಜರುಗಲಿದ್ದು, ವಿವಾಹವಾಗಲು ಇಚ್ಛಿಸುವ ವಧು-ವರರು ಸರ್ಕಾರದ ಸೌಲಭ್ಯ ಪಡೆಯಲು ಒಂದು ತಿಂಗಳ ಮೊದಲೇ ಹೆಸರು ನೋಂದಾಯಿಸಬೇಕಾಗುತ್ತದೆ.
ಈ ಸಂದರ್ಭದಲ್ಲಿ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಹರೀಶ್ ಪೂಂಜಾ, ರಘುಪತಿ ಭಟ್ ಉಪಸ್ಥಿತರಿದ್ದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಇತ್ತೀಚೆಗೆ ವಿವಾಹ ಖರ್ಚಿಗಾಗಿ ಅದೆಷ್ಟೋ ಬಡ ಕುಟುಂಬಗಳು ಮನೆ ಮಠ ಮಾರಿ ತೊಂದರೆ ಅನುಭವಿಸುತ್ತಿರುವುದು ಗಮನಕ್ಕೆ ಬಂದಿದೆ. ಸಾಲ ಸೋಲ ಮಾಡಿಕೊಂಡು ವಧು- ವರರು ಮತ್ತು ಅವರ ಪೋಷಕರು ನೋವು ಅನುಭವಿಸುತ್ತಿದ್ದಾರೆ. ಹೀಗಾಗಿಯೇ ಎಲ್ಲ ವರ್ಗದ ಜನರ ಅನುಕೂಲಕ್ಕೆ 100 ಆಯ್ದ ದೇವಾಲಯಗಳಲ್ಲಿ ಪ್ರತಿ ವರ್ಷ ಸಾಮೂಹಿಕ ವಿವಾಹ ಹಮ್ಮಿಕೊಳ್ಳುತ್ತಿದ್ದೇವೆ. ವಿವಾಹದ ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಸಾಮೂಹಿಕ ವಿವಾಹಗಳು ಅವಶ್ಯಕ. ಇದುವರೆಗೆ ಧರ್ಮಸ್ಥಳದಲ್ಲಿ ಇಂತಹ ಸಾಮೂಹಿಕ ವಿವಾಹ ನಡೆಸಲಾಗುತ್ತಿತ್ತು ಎಂದರು.
ಸಾಮೂಹಿಕ ವಿವಾಹದ ವೆಚ್ಚವನ್ನು ಸಂಬಂಧಿಸಿದ ದೇವಾಲಯದಿಂದಲೇ ಭರಿಸಲಾಗುತ್ತದೆ. ದೇವರ ದುಡ್ಡು ಸದ್ಬಳಕೆ ಆಗಬೇಕು ಎಂಬುದು ಉದ್ದೇಶ. ಯಾವುದೇ ಕಾರಣಕ್ಕೂ ಬಾಲ್ಯ ವಿವಾಹಕ್ಕೆ ಅವಕಾಶ ನೀಡುವುದಿಲ್ಲ. ಸಾಮೂಹಿಕ ವಿವಾಹದಲ್ಲಿ ಎಲ್ಲ ಜಾತಿಗಳ ಸ್ವಾಮೀಜಿಗಳು ಪಾಲ್ಗೊಂಡು ಆಶೀರ್ವಾದ ಮಾಡುವುದರಿಂದ ಮುಜುಗರವೇ ಇಲ್ಲದೆ ಎಲ್ಲ ವರ್ಗಗಳ ಜನ ಪಾಲ್ಗೊಳ್ಳಬಹುದು. ಇದು ಹಿಂದೂ ಧರ್ಮಿಯರಿಗೆ ಮಾತ್ರ ಸೀಮಿತವಾಗಿದೆ. ಅನ್ಯ ಧರ್ಮಿ ಯರು ತಮ್ಮ ಧಾರ್ಮಿಕ ಸಂಸ್ಥೆಗಳಲ್ಲಿನ ನಿಧಿ ಬಳಕೆ ಮಾಡಿಕೊಂಡು ಸಾಮೂಹಿಕ ವಿವಾಹ ಮಾಡಿದರೆ ಅದಕ್ಕೆ ನಮ್ಮದೇನು ಅಭ್ಯಂತರವಿಲ್ಲ. ಅವರಿಗೂ ನೆರವು ನೀಡುತ್ತೇವೆ ಎಂದರು.
ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ದೇವಾಲಯದ ಗೋಪುರವನ್ನು ಸಂಕೇತವಾಗಿಟ್ಟುಕೊಂಡು ಲಾಂಛನ ರೂಪಿಸಲಾಗಿದೆ. ವೈವಾಹಿಕ ಜೀವನದ ಏಳು ಹೆಜ್ಜೆಯ ಕಲ್ಪನೆಯ ಆಧಾರದ ಮೇಲೆ ಕಾರ್ಯಕ್ರಮಕ್ಕೆ ಸಪ್ತಪದಿ ಎಂದು ಹೆಸರಿಡಲಾಗಿದೆ. ಉತ್ತಮ ಆದಾಯವಿರುವ ಎ ವರ್ಗದ 100 ದೇವಾಲಯಗಳಲ್ಲಿ ಸಾಮೂಹಿಕ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ. ಏಪ್ರಿಲ್ 24ರಂದು ಮೊದಲ ಹಂತದಲ್ಲಿ ಹಾಗೂ ಮೇ 24ರಂದು ಎರಡನೆ ಹಂತದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಲಾಗುತ್ತದೆ ಎಂದರು.
ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವ ವಧುವಿಗೆ 8 ಗ್ರಾಂ ಚಿನ್ನದ ಮಾಂಗಲ್ಯ ಸೇರಿ, ವಧುವರರಿಗೆ ವಿವಾಹಕ್ಕೆ ಅಗತ್ಯವಿರುವ ವಸ್ತುಗಳ ಖರೀದಿಗೆ 55,000 ರೂ. ಗಳನ್ನು ಸಂಬಂಧಿಸಿದ ದೇವಾಲಯದಿಂದಲೇ ಭರಿಸಲಾಗುತ್ತದೆ. ವರನಿಗೆ ಹೂವಿನ ಹಾರ, ಪಂಚೆ, ಶರ್ಟ್ ಮತ್ತು ಶಲ್ಯ ಖರೀದಿಗೆ 5,000 ರೂ,ವಧುವಿಗೆ ಹೂವಿನ ಹಾರ, ಧಾರೆ ಸೀರೆ, ರವಿಕೆ ಕಣಕ್ಕೆ 10,000 ರೂ. ವಧುವಿಗೆ ಚಿನ್ನದ ತಾಳಿ, ಎರಡು ಚಿನ್ನದ ಗುಂಡುಗೆ 40,000 ರೂ.ನೀಡುವುದಾಗಿ ಸಚಿವರು ಸ್ಪಷ್ಟಪಡಿಸಿದರು.
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ 