ಚಡಚಣ: ಮಕ್ಕಳ ಆರೋಗ್ಯ ತಪಾಸಣೆ ಶಿಬಿರ

ಚಡಚಣ: ಮಕ್ಕಳ ಆರೋಗ್ಯ ತಪಾಸಣೆ ಶಿಬಿರ  Chadachan: Children's Health Check-up Camp

ಚಡಚಣ 02:  ಮಕ್ಕಳಿಗೆ ಶಿಕ್ಷಣದ ಜೊತೆಗೆ ಆರೋಗ್ಯವೂ ಪ್ರಮುಖವಾಗಿದ್ದು, ಪ್ರಾಥಮಿಕ ಹಂತದಲ್ಲೇ ಮಕ್ಕಳಲ್ಲಿನ ಆರೋಗ್ಯ ಸಮಸ್ಯೆಗಳನ್ನು ಗುರುತಿಸಿ ಚಿಕಿತ್ಸೆ ನೀಡಿದರೆ ಅವರ ಆರೋಗ್ಯ ಸದೃಢವಾಗುತ್ತದೆ ಎಂದು ವಿಜಯಪುರದ ವೇದಾಸ್ ಆನ್ ಸೈಟ್ ಹೆಲ್ತ್‌ ಕೇರ್ ಕಾರ್ಯದರ್ಶಿ ಡಾ. ಸಂಜೀವ ಜೋಶಿ ಹೇಳಿದರು.  

ಸ್ಥಳೀಯ ಶ್ರೀ ಸಂಗಮೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ಹಾಗೂ ಸಿಬ್ಬಂದಿ ವರ್ಗದವರಿಗಾಗಿ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಆಹಾರ, ವ್ಯಾಯಾಮ ಮತ್ತು ನಿದ್ರೆಯ ಮಹತ್ವದ ಕುರಿತು ಸಲಹೆ ನೀಡಿದರು.  

ಸಂಸ್ಥೆಯ ಅಧ್ಯಕ್ಷ ಡಾ. ಎಸ್‌. ಆರ್‌. ಡೋಣಗಾಂವ ಮಾತನಾಡಿ, ಮಕ್ಕಳ ಶಿಕ್ಷಣದ ಜೊತೆಗೆ ಆರೋಗ್ಯ ಕಾಳಜಿಯೂ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರತಿವರ್ಷ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಸಮಗ್ರ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಇದರಿಂದ ಮಕ್ಕಳ ಸಮಗ್ರ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು.  

ಶಾಲೆಯ ಮೆಂಟರ್ ಸ್ಮಿತಾ ಆರ್‌. ಪಾವಲೆ ಮಾತನಾಡಿ, ಮಕ್ಕಳ ವೈಯಕ್ತಿಕ ಆರೋಗ್ಯ ಹಾಗೂ ಸ್ವಚ್ಛತೆ ಕುರಿತು ಪೋಷಕರು ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.  ಶಿಬಿರದಲ್ಲಿ ವಿಜಯಪುರದ ರಾಮಸುಧಾ ಕಣ್ಣಿನ ಆಸ್ಪತ್ರೆಯ ಡಾ. ಗುರುರಾಜ ಕುಲಕರ್ಣಿ ನೇತೃತ್ವದ ತಂಡ, ಶಾಕಾಂಬರಿ ಹಲ್ಲಿನ ಚಿಕಿತ್ಸಾಲಯದ ಹಿರಿಯ ದಂತ ವೈದ್ಯ ಡಾ. ಪ್ರವೀಣ್ ಕುಮಾರ್ ಕೋಷ್ಟಿ ಹಾಗೂ ಇತರ ವೈದ್ಯರು, ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಸಿಬ್ಬಂದಿ ಮಕ್ಕಳ ಹಾಗೂ ಸಿಬ್ಬಂದಿಯ ಆರೋಗ್ಯ ತಪಾಸಣೆ ನಡೆಸಿದರು.  

ಕಾರ್ಯಕ್ರಮದಲ್ಲಿ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ. ಎಸ್‌. ಎಸ್‌. ಚೋರಗಿ, ಪ್ರಾಚಾರ್ಯ ಟಿ. ಬಿ. ದೇಸಾಯಿ, ಶಾಲೆಯ ಶಿಕ್ಷಕರು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.