ಧಾರವಾಡ - ಹುಬ್ಬಳ್ಳಿ

ಮಾದಕ ವ್ಯಸನದಿಂದ ದೂರವಿದ್ದು ಆರೋಗ್ಯಕರ ಬದುಕು ಕಟ್ಟಿಕೊಳ್ಳುವಂತೆ ಕರೆ

ಮಾದಕ ವ್ಯಸನದಿಂದ ದೂರವಿದ್ದು ಆರೋಗ್ಯಕರ ಬದುಕು ಕಟ್ಟಿಕೊಳ್ಳುವಂತೆ ಕರೆ

ಲೋಕದರ್ಶನ ವರದಿ  

ನಶಾ ಮುಕ್ತ ಭಾರತ’ ಅಭಿಯಾನದಡಿ ರಂಗೋಲಿ ಸ್ಪರ್ಧೆ  

ಹುಬ್ಬಳ್ಳಿ, ಆ. 3: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಧಾರವಾಡ, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ತಾಲೂಕು ಪಂಚಾಯತ್ ಹುಬ್ಬಳ್ಳಿ ಹಾಗೂ ಶ್ರೀ ಮೈತ್ರಿ ಸಮಗ್ರ ವ್ಯಸನಮುಕ್ತ ಪುನರ್ವಸತಿ ಕೇಂದ್ರ,

ಹುಬ್ಬಳ್ಳಿ ಮತ್ತು ಸೆಲ್ಕೊ ಫೌಂಡೇಶನ್, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ‘ನಶಾ ಮುಕ್ತ ಭಾರತ’ ಅಭಿಯಾನದ ಅಂಗವಾಗಿ ನಗರದ ಸಾಮರ್ಥ್ಯ ಸೌಧದಲ್ಲಿ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಯಿತು.  

ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ನೀರೀಕ್ಷಣಾಧಿಕಾರಿ ಡಾ. ಜಿ.ವಿ. ನಕಾರಿಗೌಡ್ರ ಮಾತನಾಡಿ, ಭಾರತವು ಯುವ ಜನಾಂಗದಿಂದ ಕೂಡಿದ ಸದೃಢ ರಾಷ್ಟ್ರವಾಗಿದ್ದು, ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ.

ಆದರೆ, ಮಾದಕ ವಸ್ತುಗಳ ವ್ಯಸನದಿಂದ ಯುವಕರು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಆದ್ದರಿಂದ ವ್ಯಸನಗಳಿಂದ ದೂರವಿದ್ದು ಆರೋಗ್ಯಕರ ಹಾಗೂ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.  

ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಸವಿತಾ ಕಾಳೆ ಮಾತನಾಡಿ, ಯುವ ಪೀಳಿಗೆ ಮಾದಕ ವ್ಯಸನದಂತಹ ದುಶ್ಚಟಗಳಿಂದ ದೂರವಿದ್ದು, ಜಾಗೃತ ಹಾಗೂ ಸದೃಢ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ತಿಳಿಸಿದರು.  

ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರೇಖಾ ಬಾಡಗಿ ಸಹ ವ್ಯಸನಮುಕ್ತ ಜೀವನದ ಮಹತ್ವವನ್ನು ವಿವರಿಸಿ, ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯದಲ್ಲಿ ಪ್ರತಿಯೊಬ್ಬರೂ ಭಾಗಿಯಾಗಬೇಕು ಎಂದು ಹೇಳಿದರು.  

ಕಾರ್ಯಕ್ರಮದಲ್ಲಿ ಎನ್‌ಆರ್‌ಎಲ್‌ಎಂ ತಾಲೂಕು ವ್ಯವಸ್ಥಾಪಕ ನಾಗರಾಜ ಹಂಚಿನಮನಿ, ಸೆಲ್ಕೊ ಫೌಂಡೇಶನ್ನ ಶಿವಶಂಕರ ಮತ್ತಿಹಳ್ಳಿ, ಲೋಕೇಶ್ ಕಲಘಟಗಿ ಹಾಗೂ ವಿಕಲಚೇತನ ಗ್ರಾಮೀಣ ಮತ್ತು ನಗರ ಪುನರ್ವಸತಿ ಕಾರ್ಯಕರ್ತರು ಉಪಸ್ಥಿತರಿದ್ದರು.  ಜಿಲ್ಲಾ ಸಂಯೋಜಕ ಆಸಿಫ್ ಆಡಿನ್ ಕಾರ್ಯಕ್ರಮ ನಿರೂಪಿಸಿದರು. ಎಂ.ಆರ್‌. ಡಬ್ಲ್ಯು. ಮಹಾಂತೇಶ್ ಕುರ್ತಕೋಟಿ ವಂದಿಸಿದರು. 


ಸುದ್ದಿ ಓದಿ