ಎಸ್‌ಐಆರ್ ಪ್ರಕ್ರಿಯೆ ಸ್ಥಗಿತಕ್ಕೆ ಆಗ್ರಹಿಸಿ ಸಿಪಿಐಎಂ ಪ್ರತಿಭಟನೆ

ಎಸ್‌ಐಆರ್ ಪ್ರಕ್ರಿಯೆ ಸ್ಥಗಿತಕ್ಕೆ ಆಗ್ರಹಿಸಿ ಸಿಪಿಐಎಂ ಪ್ರತಿಭಟನೆ CPIM protests demanding a halt to the SIR process

 

ಬಳ್ಳಾರಿ, ಸೆ. 26: ಎಸ್‌ಐಆರ್ (ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ) ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ, ತಪ್ಪಾಗಿ ಮತದಾರರ ಪಟ್ಟಿಯಿಂದ ಹೊರಗುಳಿಸಲ್ಪಟ್ಟವರ ಮತದಾನದ ಹಕ್ಕುಗಳನ್ನು ಮರುಸ್ಥಾಪಿಸಬೇಕು ಹಾಗೂ ಚುನಾವಣಾ ಆಯೋಗದ ಮೇಲಿನ ವಿಶ್ವಾಸವನ್ನು ಪುನಃಸ್ಥಾಪಿಸಬೇಕು ಎಂದು ಆಗ್ರಹಿಸಿ ಭಾರತ ಕಮ್ಯುನಿಸ್ಟ್‌ ಪಕ್ಷ (ಮಾಕ್ರ್ಸ್ವಾದಿ) ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.  

ಸೆ. 23ರಂದು ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯಲ್ಲಿ ಪ್ರಕಟವಾದ ವರದಿಗಳನ್ನು ಉಲ್ಲೇಖಿಸಿದ ಪ್ರತಿಭಟನಾಕಾರರು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ನೇತೃತ್ವದಲ್ಲಿ ಚುನಾವಣಾ ಆಯೋಗದ ಕಾರ್ಯನಿರ್ವಹಣೆ ಕುರಿತು ಹಲವು ಮೂಲಭೂತ ಪ್ರಶ್ನೆಗಳು ಉದ್ಭವಿಸಿವೆ ಎಂದು ಹೇಳಿದರು.  

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಗೆ ಮಾತ್ರ ಈ ಸಮಸ್ಯೆ ಸೀಮಿತವಾಗಿಲ್ಲ. ಚುನಾವಣಾ ಆಯೋಗದ ಕಾರ್ಯನಿರ್ವಹಣೆ ಹಾಗೂ ಅದರ ಸ್ವಾಯತ್ತತೆ ಮತ್ತು ಸಮಗ್ರತೆಯ ಬಗ್ಗೆಯೂ ಗಂಭೀರ ಆತಂಕ ಮೂಡಿದೆ ಎಂದು ಅವರು ಅಭಿಪ್ರಾಯಪಟ್ಟರು.  

ಚುನಾವಣಾ ಆಯೋಗದ ಇಬ್ಬರು ಆಯುಕ್ತರು ಕನಿಷ್ಠ 14 ಪ್ರಕರಣಗಳಲ್ಲಿ ಮತದಾರರ ನೋಂದಣಿ, ಹೆಸರುಗಳ ಅಳಿಸುವಿಕೆ ಮತ್ತು ಮರುಸ್ಥಾಪನೆ ಸೇರಿದಂತೆ ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿದ ನಿರ್ಧಾರಗಳ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದರೂ, ಅವುಗಳನ್ನು ಪರಿಗಣಿಸದೆ ಮುಖ್ಯ ಚುನಾವಣಾ ಆಯುಕ್ತರು ತಮ್ಮದೇ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.  

ಗೋವಾದಲ್ಲಿ 97 ಮತದಾರರನ್ನು ಅನರ್ಹರೆಂದು ಗುರುತಿಸಿದ ಚುನಾವಣಾ ಆಯೋಗದ ನಿರ್ಧಾರವು ಮತದಾರರ ವಿಶ್ವಾಸಕ್ಕೆ ಧಕ್ಕೆಯುಂಟುಮಾಡಿದೆ ಎಂದು ಅವರು ಹೇಳಿದರು. ಇಂತಹ ಬೆಳವಣಿಗೆಗಳಿಗೆ ಚುನಾವಣಾ ಆಯೋಗವೇ ಹೊಣೆಗಾರಿಕೆ ವಹಿಸಬೇಕು ಎಂದು ಆಗ್ರಹಿಸಿದರು.