ತ್ಯಾಗ, ಬಲಿದಾನದ ಸಂದೇಶ ಸಾರಿದ ಬಕ್ರೀದ್ ಹಬ್ಬ ಭಕ್ತಿಭಾವದಿಂದ ಆಚರಣೆ

ತ್ಯಾಗ, ಬಲಿದಾನದ ಸಂದೇಶ ಸಾರಿದ ಬಕ್ರೀದ್ ಹಬ್ಬ ಭಕ್ತಿಭಾವದಿಂದ ಆಚರಣೆ  Bakrid festival, which carries the message of sacrifice, is celebrated with devotion

ಲೋಕದರ್ಶನ ವರದಿ  

ಮುಂಡಗೋಡ 28 : ತಾಲೂಕಾದ್ಯಂತ ತ್ಯಾಗ ಮತ್ತು ಬಲಿದಾನದ ಸಂದೇಶ ಸಾರುವ ಬಕ್ರೀದ್ (ಈದ್‌-ಉಲ್‌-ಅದ್ಹಾ) ಹಬ್ಬವನ್ನು ಮುಸ್ಲಿಂ ಬಾಂಧವರು ಶ್ರದ್ಧಾ, ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಿದರು. ಪಟ್ಟಣದ ಮುಸ್ಲಿಂ ಸಮುದಾಯದವರು ಗುರುವಾರ ಬೆಳಗ್ಗೆ ಯಲ್ಲಾಪುರ ರಸ್ತೆಯಲ್ಲಿರುವ ನೂರಾನಿ ಮಸೀದಿ ಸಮೀಪ ಜಮಾವಣೆಗೊಂಡರು. ಪಟ್ಟಣದ ಐದು ಮಸೀದಿಗಳ ಜಮಾತಿನ ಮುಸ್ಲಿಂ ಬಾಂಧವರು ಹಾಗೂ ಅಕ್ಕಪಕ್ಕದ ಗ್ರಾಮಗಳ ಭಕ್ತರು ಅಲ್ಲಾಹನ ನಾಮಸ್ಮರಣೆ ಮಾಡುತ್ತ ಕಾಲ್ನಡಿಗೆಯ ಮೂಲಕ ಕಲಘಟಗಿ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿ, ಈದ್‌-ಉಲ್‌-ಅದ್ಹಾ ಹಬ್ಬದ ವಿಶೇಷ ನಮಾಜ್ (ಪ್ರಾರ್ಥನೆ) ಸಲ್ಲಿಸಿದರು. ನೂರಾನಿ ಮಸೀದಿಯ ಹಾಫೀಜ್ ಮುಫ್ತಿ ಮಹ್ಮದ್ ಇಫ್ತಿಕಾರ್ ಅವರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು.  

ಇದೇ ವೇಳೆ ನೂರಾನಿ ಮಸೀದಿಗೆ ಜಿಲ್ಲಾ ವಕ್ಫ್‌ ಸಮಿತಿಯಿಂದ ಆಡಳಿತಾಧಿಕಾರಿಯಾಗಿ ನೇಮಕಗೊಂಡಿರುವ ತೌಫೀನ್ ಅಗಡಿ ಅವರು ಮುಸ್ಲಿಂ ಬಾಂಧವರಿಗೆ ಹಬ್ಬದ ಶುಭಾಶಯ ಕೋರಿದರು. ಹಬ್ಬದ ಪ್ರಯುಕ್ತ ಪೊಲೀಸ್ ಬಂದೋಬಸ್ತ್‌ ಏರಿ​‍್ಡಸಲಾಗಿತ್ತು. ವಿಶೇಷ ಪ್ರಾರ್ಥನೆ ಬಳಿಕ ಮುಸ್ಲಿಂ ಬಾಂಧವರು ಖಬರಸ್ತಾನಕ್ಕೆ ತೆರಳಿ, ಸ್ವರ್ಗಸ್ಥರಾದ ಬಂಧುಬಳಗದವರ ಗೋರಿಗಳಿಗೆ ಹೂಮಾಲೆ ಹಾಕಿ, ಸುಗಂಧ ದ್ರವ್ಯ ಸಿಂಪಡಿಸಿ ಪ್ರಾರ್ಥನೆ ಸಲ್ಲಿಸಿದರು.