ಹೂವಿನ ಹಡಗಲಿ

ಜೈನ ಧರ್ಮದ ಉಗಮಕ್ಕೆ ಧಾರ್ಮಿಕ ಬಿಕ್ಕಟ್ಟು ಕಾರಣ

ಜೈನ ಧರ್ಮದ ಉಗಮಕ್ಕೆ ಧಾರ್ಮಿಕ ಬಿಕ್ಕಟ್ಟು ಕಾರಣ


 ಹೂವಿನಹಡಗಲಿ  20: ಹಿಂಸೆ, ಜಾತಿ ಪದ್ಧತಿ ಹಾಗೂ ಧಾರ್ಮಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸಾಮಾನ್ಯ ಜನರಿಗೆ ಅರ್ಥವಾಗುವ ಸರಳ ಮತ್ತು ಅಹಿಂಸಾ ಮಾರ್ಗವನ್ನು ಬೋಧಿಸಿದ ಜೈನ ಧರ್ಮ ಉದಯವಾಯಿತು ಎಂದು ವಿಶ್ರಾಂತ ಉಪನ್ಯಾಸಕ ಎಂ.ಪಿ.ಎಂ. ದಯಾನಂದ ಸ್ವಾಮಿ ಹೇಳಿದರು.  

ತಾಲೂಕಿನ ಸೋಗಿ ಗ್ರಾಮದ ಪಟ್ಟೇದ ಸಿದ್ಧಮಲ್ಲಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದಿಂದ ಆಯೋಜಿಸಿದ್ದ ವಿವಿಧ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಜೈನ ಧರ್ಮ ನಡೆದು ಬಂದ ದಾರಿ’ ಹಾಗೂ ‘ಕನ್ನಡ ಸಾಹಿತ್ಯಕ್ಕೆ ಜೈನ ಕವಿಗಳ ಕೊಡುಗೆ’ ವಿಷಯಗಳ ಕುರಿತು ಅವರು ಮಾತನಾಡಿದರು.  

ಜೈನ ಧರ್ಮದ 24 ತೀರ್ಥಂಕರರಲ್ಲಿ ಆದಿನಾಥ, ಪಾರ್ಶ್ವನಾಥ ಮತ್ತು ಮಹಾವೀರರು ಪ್ರಮುಖರು. ಸತ್ಯ, ಅಹಿಂಸೆ, ಅಸ್ತೇಯ, ಅಪರಿಗ್ರಹ ಮತ್ತು ಬ್ರಹ್ಮಚರ್ಯ ಜೈನ ಧರ್ಮದ ಪಂಚತತ್ವಗಳಾಗಿವೆ. ಚಂದ್ರಗುಪ್ತ ಮೌರ್ಯ ಸೇರಿದಂತೆ ಗಂಗರು, ಚಾಲುಕ್ಯರು, ರಾಷ್ಟ್ರಕೂಟರು ಹಾಗೂ ಹೊಯ್ಸಳರು ಜೈನ ಧರ್ಮಕ್ಕೆ ಆಶ್ರಯ ನೀಡಿದ್ದರು. ಶ್ವೇತಾಂಬರ ಮತ್ತು ದಿಗಂಬರ ಪ್ರಮುಖ ಪಂಥಗಳಾಗಿವೆ ಎಂದರು.  

ಕರ್ನಾಟಕದ ಮೂಡುಬಿದಿರೆ, ಶ್ರವಣಬೆಳಗೊಳ, ಕಾರ್ಕಳ ಹಾಗೂ ಧರ್ಮಸ್ಥಳ ಜೈನರ ಪ್ರಮುಖ ಪವಿತ್ರ ಕ್ಷೇತ್ರಗಳಾಗಿವೆ. ಹೂವಿನಹಡಗಲಿ ಭಾಗದ ಕೋಗಳಿ, ಅಂಬಳಿ, ಮಾಗಳ, ಮಾಡಲಗೇರಿ, ಮಸಲವಾಡ ಹಾಗೂ ಹೊಳಗುಂದಿ ಮುಂತಾದ ಸ್ಥಳಗಳು ಜೈನರ ಪ್ರಮುಖ ಕೇಂದ್ರಗಳಾಗಿದ್ದವು ಎಂದು ತಿಳಿಸಿದರು.  


ಸುದ್ದಿ ಓದಿ