ಕೊಂಕಣ ರೈಲ್ವೆಗಾಗಿ ಭೂಮಿ ಕಳೆದು ಕೊಂಡಿದ್ದ 710 ಪ್ರಕರಣಗಳಿಗೆ ಪರಿಹಾರದ ಹಂತಕ್ಕೆ : ಸಂಸದ ಕಾಗೇರಿ

ಕೊಂಕಣ ರೈಲ್ವೆಗಾಗಿ ಭೂಮಿ ಕಳೆದು ಕೊಂಡಿದ್ದ 710 ಪ್ರಕರಣಗಳಿಗೆ ಪರಿಹಾರದ ಹಂತಕ್ಕೆ : ಸಂಸದ ಕಾಗೇರಿ 710 cases of land acquisition for Konkan Railway nearing compensation stage: MP Kageri

ಕಾರವಾರ 12 : ಕೊಂಕಣ ರೈಲ್ವೆ ಮಾರ್ಗಕ್ಕಾಗಿ 26 ವರ್ಷಗಳ ಹಿಂದೆ ಭೂಮಿ ಕಳೆದುಕೊಂಡ 800  ನಿರಾಶ್ರಿತರು ಹಾಗೂ ಭೂಮಾಲಕರಿಗೆ ಪರಿಹಾರ ನೀಡುವ ಕೊನೆಯ ಹಂತದ ಪ್ರಯತ್ನಗಳು ಸಾಗಿವೆ. ಇದಕ್ಕಾಗಿ ಭೂಮಿ ಕಳೆದುಕೊಂಡವರ ದಾಖಲೆ ಪರೀಶೀಲಿಸಿ 710 ಪ್ರಕರಣ ಗಳಲ್ಲಿ ನಿರ್ಣಾಯಕ ನಿರ್ಧಾರ ತೆಗೆದುಕೊಂಡ ಭೂ ಸ್ವಾಧೀನ ಅಧಿಕಾರಿ, ಕಾರವಾರ ಸಹಾಯಕ ಕಮಿಷನರ್ ಶ್ರವಣಕುಮಾರ್‌ಗೆ ಅಭಿನಂದನೆಗಳು ಎಂದು ಸಂಸದ ವಿಶ್ವೇಶ್ವರ ಹೆಗಡೆ ಹೇಳಿದರು.  

ಕಾರವಾರದಲ್ಲಿ ಅವರು ಸುದ್ದಿಗಾರರ ಜೊತೆ  ಮಾತನಾಡಿ  ಕೊಂಕಣ ರೈಲ್ವೆ  ನಿರಾಶ್ರಿತರಿಗೆ ಪರಿಹಾರದ ವಿಷಯ ಹಂಚಿಕೊಂಡರು. ಕೊಂಕಣ ರೈಲ್ವೇಗಾಗಿ ಭೂಮಿ ಕಳೆದುಕೊಡವರಿಗೆ ಪರಿಹಾರ ನೀಡಲಾಗಿದೆ. ಆದರೆ ಅನಕ್ಷರಸ್ಥರು, ದಾಖಲೆ ಇಲ್ಲದವರು, ದಾಖಲೆ ಕಳೆದಿಕೊಂಡವರು, ಮುಂಬಯಿಗೆ ಹೋಗಿ ನೆಲೆಸಿದವರಿಗೆ ಪರಿಹಾರ ನೀಡಲು ಸಾಧ್ಯವಾಗಿರಲಿಲ್ಲ. ಅಂಥ 800 ಪ್ರಕರಣಗಳಲ್ಲಿ, 710 ಪ್ರಕರಣ ಇತ್ಯರ್ಥವಾಗಿ ಪರಿಹಾರ ಪಡೆವ ಹಂತ ತಲುಪಿವೆ. ಉಳಿದ 90 ಪ್ರಕರಣಗಳಲ್ಲಿ  ಅಂತಿಮ ನಿರ್ಣಯ ಆಗಬೇಕಿದೆ. 710 ಪ್ರಕರಣ ಪರಿಹಾರಕ್ಕೆ ಕೊಂಕಣ ರೈಲ್ವೆ ಮುಖ್ಯ ಕಚೇರಿ ತಲುಪಲಿವೆ.

ಇದೊಂದು ಪರಿಹಾರ ನೀಡಿದರೆ, ಬಹುದಿನಗಳ ಸಮಸ್ಯೆಗೆ ಪರಿಹಾರ ಸಿಕ್ಕಂತಾಗುತ್ತದೆ ಎಂದು ಸಂಸದ ಕಾಗೇರಿ ಹೇಳಿದರು.ಕೊಂಕಣ ರೈಲ್ವೆಗೆ ತಲುಪುವ ರಸ್ತೆಗಳ ಅಭಿವೃದ್ಧಿಗೆ ಮಹಾರಾಷ್ಟ್ರ, ಗೋವಾ ರಾಜ್ಯಗಳು ನೂರು ಕೋಟಿ ನೀಡುತ್ತಿವೆ. ಕರ್ನಾಟಕ ಸರ್ಕಾರ  ಕೊಂಕಣ ರೈಲ್ವೆ ತಲುಪುವ  ರಸ್ತೆಗಳ ಅಭಿವೃದ್ಧಿಗೆ ಹಣ ನೀಡುತ್ತಿಲ್ಲ ಎಂದರು. ಇದು ಬೇಸರದ ಸಂಗತಿ ಎಂದು ಸಂಸದರು ನುಡಿದರು. ಟನಲ್ ಕಾರ್ಯ ನಡೆದಿದೆ: ಗೋವಾದಲ್ಲಿ ಎರಡು ಕಡೆ ಪರ್ಯಾಯ ಟನಲ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಮಳೆಗಾಲದಲ್ಲಿ ನೀರು ಸೋರುವ ಎರಡು ಟನಲ್ ಗೆ ಪರ್ಯಾಯ ಟನಲ್ ನಿರ್ಮಾಣ ನಡೆಯುತ್ತಿದೆ ಎಂದು ಕೊಂಕಣ ರೈಲ್ವೆ ಮುಖ್ಯ ಎಂಜಿನಿಯರ್ ಎಲ್‌. ಪ್ರಕಾಶ್ ಹೇಳಿದರು.  

ಹೊಸ ಟನಲ್ ಕಾರ್ಯ ಮುಗಿದ ನಂತರ ಮಳೆ ನೀರು ಸೋರದಂತೆ,  ಹಳೆಯ ಟನಲ್ ಪುನಃ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು. ನಂತರ ಕಾರವಾರ ಮಡವಾಂಗ್ ಟ್ರೇನ್ ಪ್ರತಿನಿತ್ಯ ಪೆರ್ನಮ್ ತನಕ ಓಡಲಿದೆ ಎಂದರು. ಕೊಂಕಣ ರೈಲ್ವೆಗೆ ಡಬ್ಬಲಿಂಗ್  ಮಾರ್ಗ 52  ಕಿಮೀ ಮುಗಿದಿದೆ.  789 ಕಿಮೀ ಯಲ್ಲಿ 700 ಕಿಮೀ ಪೂರ್ಣ ಡಬ್ಬಲಿಂಗ್ ಮಾಡುವ ಅಗತ್ಯ ಇಲ್ಲ. ಈಗಾಗಲೇ ನೇರ ಮಾರ್ಗ ಇರುವ ಕಡೆ ನಮಗೆ ಭೂಮಿ ಲಭ್ಯತೆ ಇದೆ. ಪರ್ಯಾಯ ಸುರಂಗ ಮಾರ್ಗಕ್ಕೆ ಕೆಲವು ಕಡೆ ಭೂ ಸ್ವಾಧೀನ ಆಗಬೇಕು. ಸುರಂಗ ಮತ್ತು ಕೆಲವು ಕಡೆ ಡಬ್ಬಲಿಂಗ್ ಮಾಡಲು ಖಾಸಗಿ ಭೂಮಿ ಬೇಕು. ಅದರ ಪ್ರಮಾಣ ಚಿಕ್ಕದು.  ಕೇಂದ್ರದ ಅನುದಾನ ಬಂದಾಗ ಈ ಕಾರ್ಯಕ್ಕೆ ಬರುವ ದಿನಗಳಲ್ಲಿ ಚಾಲನೆ ಸಿಗಲಿದೆ ಎಂದು  ಕೊಂಕಣ ರೈಲ್ವೆ ಮುಖ್ಯ ಎಂಜಿನಿಯರ್ ಎಲ್‌. ಪ್ರಕಾಶ್ ಹೇಳಿದರು. ಸುಧಾ ಕೃಷ್ಣ ಮೂರ್ತಿ ಉಪಸ್ಥಿತರಿದ್ದರು.