ರಾಷ್ಟ್ರೀಯ ಅಂಧತ್ವ ನಿವಾರಣಾ ಕಾರ್ಯಕ್ರಮದಡಿ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ

ರಾಷ್ಟ್ರೀಯ ಅಂಧತ್ವ ನಿವಾರಣಾ ಕಾರ್ಯಕ್ರಮದಡಿ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ Free eye check-up and surgery under the National Blindness Prevention Program

ಲೋಕದರ್ಶನ ವರದಿ  

ಬಳ್ಳಾರಿ 12:  ಸಾರ್ವಜನಿಕರಲ್ಲಿ ಕಾಡುವ ಅಂಧತ್ವ ಮತ್ತು ದೃಷ್ಟಿ ದೌರ್ಬಲ್ಯವನ್ನು ತಡೆಗಟ್ಟುವುದು, ಸೂಕ್ತ ಚಿಕಿತ್ಸೆ ನೀಡುವುದು ಹಾಗೂ ಜನರ ದೃಷ್ಟಿ ಆರೋಗ್ಯವನ್ನು ಸುಧಾರಿಸುವುದು ರಾಷ್ಟ್ರೀಯ ಅಂಧತ್ವ ನಿವಾರಣಾ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಅಂಧತ್ವದ ಪ್ರಮಾಣವನ್ನು ನಿರಂತರವಾಗಿ ಕಡಿಮೆ ಮಾಡುವುದು. ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳ ಜನರಿಗೂ ಗುಣಮಟ್ಟದ ನೇತ್ರ ಚಿಕಿತ್ಸೆ ಸುಲಭವಾಗಿ ಲಭ್ಯವಾಗುವಂತೆ ಮಾಡುವುದು. ದೃಷ್ಟಿ ದೌರ್ಬಲ್ಯ ಹೊಂದಿರುವವರಿಗೆ ಅಗತ್ಯ ಪುನರ್ವಸತಿ ಸೇವೆಗಳನ್ನು ಒದಗಿಸುವುದು ಹಾಗೂ ಉಚಿತ ನೇತ್ರ ಚಿಕಿತ್ಸೆ ಮತ್ತು ಉಚಿತ ಕನ್ನಡಕಗಳನ್ನು ವಿತರಿಸುವುದು. ಶಾಲಾ ಮಕ್ಕಳಲ್ಲಿ ದೃಷ್ಟಿ ತಪಾಸಣೆ ನಡೆಸಿ, ಬಾಲ್ಯ ಅಂಧತ್ವವನ್ನು ತಡೆಗಟ್ಟುವುದು ಮತ್ತು ಕಣ್ಣಿನ ದೋಷವಿರುವ ಮಕ್ಕಳಿಗೆ ಉಚಿತ ಕನ್ನಡಕ ನೀಡುವುದು. ಕಣ್ಣಿನ ಆರೋಗ್ಯ ಹಾಗೂ ಕಾರ್ನಿಯಾ ದಾನ (ನೇತ್ರದಾನ) ಮತ್ತು ಕಣ್ಣಿನ ಬ್ಯಾಂಕುಗಳ ಕುರಿತು ಸಾರ್ವಜನಿಕರಲ್ಲಿ ವ್ಯಾಪಕ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಪ್ರಮುಖ ಅಂಶಗಳಾಗಿವೆ ಎಂದು ತಿಳಿಸಿದ್ದಾರೆ.