ತಪ್ಪಿಸ್ಥರ ವಿರುದ್ದ ಸೂಕ್ತ ಶಿಸ್ತು ಕ್ರಮ ಜರುಗಿಸಿ

ತಪ್ಪಿಸ್ಥರ ವಿರುದ್ದ ಸೂಕ್ತ ಶಿಸ್ತು ಕ್ರಮ ಜರುಗಿಸಿ  Take appropriate disciplinary action against the culprits.

ಲೋಕದರ್ಶನ ವರದಿ 

ಶಿಗ್ಗಾವಿ 07:  ಸುಳ್ಳು ಆರೋಪಗಳ ಮೂಲಕ ಅನಗತ್ಯ ಗೊಂದಲ ಸೃಷ್ಟಿಸುತ್ತಿರುವವರ ವಿರುದ್ಧ ತಕ್ಷಣವೇ ಸೂಕ್ತ ಶಿಸ್ತು ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಪಕ್ಷಕ್ಕೆ ಹಾನಿ ಉಂಟಾಗಲಿದೆ ಎಂದು ಜಿಲ್ಲಾ ಅಧ್ಯಕ್ಷರಿಗೆ ಕ್ಷೇತ್ರದ ಮುಖಂಡರು ಪತ್ರ ಬರೆದು ವಿನಂತಿ ಮಾಡಿದ್ದಾರೆ. ಇತ್ತೀಚಿಗೆ ಜಿಲ್ಲೆಯ ಕಾಂಗ್ರೆಸ್ ನಲ್ಲಿ ಶಿಸ್ತು ಉಲ್ಲಂಘನೆಯಾಗುತ್ತಿದ್ದು, ಸುಳ್ಳು ಆರೋಪಗಳ ಮೂಲಕ ಶಾಸಕರನ್ನು ತಪ್ಪಿತಸ್ಥರನ್ನಾಗಿ ಬಿಂಬಿಸಿ ಗೊಂದಲ ಸೃಷ್ಟಿಸುವ ಪ್ರಯತ್ನ ನಡೆಯುತ್ತಿವೆ ಎಂದು ತಾಲೂಕಿನ ಕಾಂಗ್ರೆಸ್‌ ಕಾರ್ಯಕರ್ತರು ಆತಂಕ ವ್ಯಕ್ತಪಡಿಸಿದ್ದಾರೆ. ಬಿಜೆಪಿ ನಾಯಕರಾದ ಪ್ರಹ್ಲಾದ್ ಜೋಶಿ ಹಾಗೂ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಶಿಗ್ಗಾವಿ ಶಾಸಕ ಯಾಸೀರ್‌ಖಾನ್ ಪಠಾಣ್ ಅವರು ಆರೋಪ ಮಾಡಿರುವುದು ಸರಿಯಲ್ಲ ಮತ್ತು ಹಾಗೆ ಮಾತನಾಡಬಾರದು ಎಂದು ಹಾವೇರಿ ನಗರದಲ್ಲಿ ಹೆಸ್ಕಾಂ ಅಧ್ಯಕ್ಷ ಸೈಯದ್ ಅಜ್ಜಂಪೀರ್‌ಖಾದ್ರಿ ಅವರು ಮಾಧ್ಯಮ ಹೇಳಿಕೆ ನೀಡಿದ್ದಾರೆ.

ಖಾದ್ರಿ ಅವರು ಬಿಜೆಪಿ ನಾಯಕರನ್ನು ಸಮರ್ಥಿಸಿ, ಸ್ವಪಕ್ಷದ ಶಾಸಕರ ತೇಜೋವಧೆ ಮಾಡುವ ರೀತಿಯಲ್ಲಿ ನಡೆದುಕೊಂಡಿದ್ದಾರೆ. ಇದು ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುವಂತಿದೆ ಎಂದು ಮನವಿಯಲ್ಲಿ ಪ್ರಶ್ನಿಸಲಾಗಿದೆ.ಶಾಸಕ ಪಠಾಣ ಅವರು ಮಾಜಿ ಸಚಿವರಾದ ಜಮೀರ್ ಅಹಮ್ಮದ್ ಖಾನ್ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕೆಂಬ ಹೇಳಿಕೆ ನೀಡಿದ್ದಾರೆಂದು ಖಾದ್ರಿ ಅವರು ಸುದ್ದಿಗೋಷ್ಠಿಯಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ. ಆದರೆ ಶಾಸಕ ಪಠಾಣ ಅವರು ಅಂತಹ ಯಾವುದೇ ಹೇಳಿಕೆ ನೀಡಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಈ ಬಗ್ಗೆ ಪಕ್ಷದ ಜಿಲ್ಲಾಧ್ಯಕ್ಷರು ಸ್ಪಷ್ಟ ಮಾಹಿತಿ ತರಿಸಿಕೊಳ್ಳಬೇಕು ಎಂದು ಕಾರ್ಯಕರ್ತರು ಕೋರಿದ್ದಾರೆ.