ಗ್ರಾಮದ ಅಭಿವೃದ್ಧಿಯ ಹಿತಚಿಂತಕ ಬಸನಗೌಡ ದುಂಡಿಗೌಡ್ರ ಸ್ಮರಣಾರ್ಥ ಮೌನಾಚರಣೆ

ಗ್ರಾಮದ ಅಭಿವೃದ್ಧಿಯ ಹಿತಚಿಂತಕ ಬಸನಗೌಡ ದುಂಡಿಗೌಡ್ರ ಸ್ಮರಣಾರ್ಥ ಮೌನಾಚರಣೆ  Silent ceremony in memory of village development benefactor Basana Gowda Dundigowda

ಶಿಗ್ಗಾವಿ, ಆ.3: ತಾಲೂಕಿನ ಬನ್ನೂರು ಗ್ರಾಮದ ಉನ್ನತಿ ಕಾನ್ವೆಂಟ್ ಶಾಲೆಯಲ್ಲಿ ಗ್ರಾಮದ ಹಿರಿಯ ಜೀವಿ, ಸಮಾಜಸೇವಕ ಹಾಗೂ ಗ್ರಾಮದ ಅಭಿವೃದ್ಧಿಯ ಹಿತಚಿಂತಕರಾಗಿದ್ದ ಬಸನಗೌಡ ದುಂಡಿಗೌಡ್ರ ಅವರ ಸ್ಮರಣಾರ್ಥ ಎರಡು ನಿಮಿಷಗಳ ಮೌನಾಚರಣೆ ನಡೆಸಲಾಯಿತು.  ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ಮೌನಾಚರಣೆಯಲ್ಲಿ ಭಾಗವಹಿಸಿ, ದಿವಂಗತ ಬಸನಗೌಡ ದುಂಡಿಗೌಡ್ರ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿದರು.  

ಈ ಸಂದರ್ಭದಲ್ಲಿ ಉನ್ನತಿ ಕಾನ್ವೆಂಟ್ ಶಾಲೆಯ ಆಡಳಿತ ಮಂಡಳಿ ಸಲಹೆಗಾರ ಮಹಮ್ಮದ್ ಜಾಫರ್ ಮಾತನಾಡಿ, ಬಸನಗೌಡ ದುಂಡಿಗೌಡ್ರ ಅವರು ಶಿಕ್ಷಣ ಪ್ರೇಮಿಯಾಗಿದ್ದು, ಅವರ ಪುತ್ರ ಹಾಗೂ ಭಾರತ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಅವರು ತಂದೆಯ ಹೆಸರಿನಲ್ಲಿ ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತಿದ್ದಾರೆ. ಉನ್ನತಿ ಕಾನ್ವೆಂಟ್ ಶಾಲೆಗೆ ಸಹ ಉದಾರ ದೇಣಿಗೆಗಳನ್ನು ನೀಡಿ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.  

ಶಾಲೆಯ ಮುಖ್ಯೋಪಾಧ್ಯಾಯಿನಿ ಸುಮಂಗಲಾ ಹಿರೇಮಠ ಮಾತನಾಡಿ, ಬಸನಗೌಡ ದುಂಡಿಗೌಡ್ರ ಅವರ ನಿಧನದಿಂದ ಗ್ರಾಮ ಹಾಗೂ ತಾಲೂಕಿಗೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದರು.  ಈ ಸಂದರ್ಭದಲ್ಲಿ ಶಾಲೆಯ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.