ಕಂಪ್ಲಿಯಲ್ಲಿ ಬುಧವಾರ ಸುರಿದ ಮಳೆಯ ದೃಶ್ಯ ಕಂಪ್ಲಿ ತಾಲೂಕಿನಾದ್ಯಂತ ಮಳೆಯಾರ್ಭಟ : ಜನಜೀವನ ಅಸ್ತವ್ಯಸ್ತ : ಗರಿಗದಿರಿದ ಕೃಷಿ ಚಟುವಟಿಕೆ
ಕಂಪ್ಲಿ:ಮೇ.21. ತಾಲೂಕಿನ ವಿವಿಧೆಡೆ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಕೃಷಿ ಚಟುವಟಿಕೆಗಳು ಗರಿಗೆದರಿದರೆ ಮತ್ತೊಂದೆಡೆ ಮಳೆಯ ಅವಾಂತರಕ್ಕೆ ಜನರು ತೊಂದರೆ ಅನುಭವಿಸುವಂತಾಯಿತು. ತಾಲೂಕಿನಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಪಟಣದಲ್ಲಿ ಭಾರಿ ಮಳೆಯು ಜನರಿಗೆ ತೊಂದರೆಗಳನ್ನುಂಟು ಮಾಡಿದೆ. ಪಟ್ಟಣ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ತಗ್ಗು ಪ್ರದೇಶಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ಹಾಗು ಕೆಲವೊಂದು ಮನೆಗಳಿಗೆ ನೀರು ನುಗ್ಗಿದ್ದು, ರಸ್ತೆಗಳು ಕೆರೆಯಂತಾಗಿ ವಾಹನ ಸವಾರರು ಸಂಚರಿಸಲು ಕಷ್ಟದ ಅನುಭವವಾಗಿದೆ. ಒಳಚರಂಡಿಗಳ ನೀರು ರಸ್ತೆಯಲ್ಲಿ ಹರಿದು ಬರುತ್ತಿದ್ದು ಬಹಳಷ್ಟು ತೊಂದರೆಯಾಗುತ್ತಿದೆ. ಕಳೆದ ರಾತ್ರಿಯಿಂದ ಹಿಡಿದು ಆರಂಭವಾದ ಮಳೆ ಬುಧವಾರವೂ ಸುರಿಯಿತು. ವಿವಿಧೆಡೆ ಮಳೆ ಜೋರಾಗಿ ಸುರಿದ ಪರಿಣಾಮ ಚರಂಡಿಗಳು ತುಂಬಿ ರಸ್ತೆ ಮೇಲೆ ನೀರು ಹರಿಯಿತು. ಕೃಷಿ ಜಮೀನಿನಲ್ಲಿ ನೀರು ಸಂಗ್ರಹಗೊಂಡಿದ್ದು ರೈತರು ಸಂತಸ ವ್ಯಕ್ತಪಡಿಸಿದರು. ತಾಲೂಕಿನ ಬಹುತೇಕ ಭಾಗದಲ್ಲಿ ಪೂರ್ವಮುಂಗಾರು ಮಳೆಯ ಚುರುಕು ಪಡೆದಿದೆ. ಈ ಮಳೆಯಿಂದಾಗಿ ಮುಂಗಾರು ಹಂಗಾಮಿನ ಬಿತ್ತನೆಗೆ ಸಿದ್ಧತೆಗೆ ಅನುವು ಮಾಡಿಕೊಟ್ಟಿದೆ. ಈ ಬಾರಿಯ ಬೇಸಿಗೆ ಅವಧಿಯಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದರಿಂದ ಏಪ್ರಿಲ್ ತಿಂಗಳಲ್ಲಿ ಕೊಳವೆ ಬಾವಿಗಳಲ್ಲಿಯೂ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಅಂತರ್ಜಲ ಕುಸಿಯುವ ಜತೆಗೆ ನೀರಿನ ಅಭಾವಕ್ಕೆ ಕಾರಣವಾಗಿತ್ತು. ಬಿಸಿಲಿನ ತಾಪಕ್ಕೆ ಜನರು ಬೆಚ್ಚಿಬಿದ್ದಿದ್ದರು. ಆದರೆ, ಸದ್ಯ ಸುರಿದ ಮಳೆಯಿಂದ ಇಳೆ ತಂಪಾಗಿದೆ.