ಗಂಗೇಕೊಳ್ಳದ 16 ಮನೆಗಳಿಗೆ ಹಕ್ಕುಪತ್ರ ನೀಡಲು ಜಿಲ್ಲಾಧಿಕಾರಿಗೆ ಮನವಿ

ಗಂಗೇಕೊಳ್ಳದ 16 ಮನೆಗಳಿಗೆ ಹಕ್ಕುಪತ್ರ ನೀಡಲು ಜಿಲ್ಲಾಧಿಕಾರಿಗೆ ಮನವಿ Request to the District Collector to issue title deeds to 16 houses not in Gangekolla

 ಕಾರವಾರ: ನಾಡು ಮಾಸ್ಕೇರಿ ಗ್ರಾಮ ಪಂಚಾಯಿತಿ, ಗೋಕರ್ಣ ವ್ಯಾಪ್ತಿಯ ಗಂಗೇಕೊಳ್ಳದ ನಿವಾಸಿಗಳಿಗೆ ಹಕ್ಕುಪತ್ರ ನೀಡಬೇಕೆಂದು ಪ್ರಗತಿಪರ ರಾಜ್ಯ ದಲಿತ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಎಲಿಷಾ ಜಿ. ಯಲಕಪಾಟಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.  

ಗಂಗೇಕೊಳ್ಳ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳು ಸಮರ​‍್ಕವಾಗಿ ಒದಗಿಸಲ್ಪಟ್ಟಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಸುಮಾರು 45 ಕುಟುಂಬಗಳು ಕಳೆದ 35 ರಿಂದ 40 ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದರೂ, ಇನ್ನೂ ಎಲ್ಲರಿಗೂ ಹಕ್ಕುಪತ್ರ ನೀಡಲಾಗಿಲ್ಲ.  

ಸರ್ಕಾರದ ದಾಖಲೆಗಳ ಪ್ರಕಾರ ಉತ್ತರ ಕನ್ನಡ ಜಿಲ್ಲೆ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿಯಲ್ಲಿದ್ದರೂ, ಗಂಗೇಕೊಳ್ಳದ ನಿವಾಸಿಗಳು ಇನ್ನೂ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿ ಕಷ್ಟಕರ ಪರಿಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.  

ಈಗಾಗಲೇ 26 ಮನೆಗಳಿಗೆ ಅತಿಕ್ರಮಣ ಸಕ್ರಮಗೊಳಿಸಿ ಆರ್ಟಿಸಿ ದಾಖಲೆ ಹಾಗೂ ಹಕ್ಕುಪತ್ರಗಳನ್ನು ನೀಡಲಾಗಿದೆ. ಆದರೆ ಉಳಿದ 16 ಮನೆಗಳಿಗೆ ಇನ್ನೂ ಸಕ್ರಮಗೊಳಿಸುವ ಪ್ರಕ್ರಿಯೆ ಪೂರ್ಣಗೊಂಡಿಲ್ಲ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.  

ಉಳಿದ 16 ಮನೆಗಳ ಅತಿಕ್ರಮಣವನ್ನು ತಕ್ಷಣ ಸಕ್ರಮಗೊಳಿಸಿ ಹಕ್ಕುಪತ್ರಗಳನ್ನು ನೀಡಬೇಕು ಹಾಗೂ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದು ಮನವಿಯಲ್ಲಿ ಜಿಲ್ಲಾಧಿಕಾರಿಯನ್ನು ವಿನಂತಿಸಲಾಗಿದೆ.  ಈ ಸಂದರ್ಭದಲ್ಲಿ ನಾಗು ಕೆ., ಮೆಹಬೂಬ್ ಇನಾಮ್ದಾರ್, ರೂಪೇಶ್ ಗುನಗಿ, ವೀಣಾ ನಾಯ್ಕ, ನಾಗರಾಜ್ ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.