ಸಂಗೀತವು ವಿಶ್ವವಂದ್ಯ ಭಾಷೆ : ಸಿದ್ಧರಾಜ ಪೂಜಾರಿ

ಸಂಗೀತವು ವಿಶ್ವವಂದ್ಯ ಭಾಷೆ : ಸಿದ್ಧರಾಜ ಪೂಜಾರಿ Music is a universally revered language: Siddharaja Poojari

ಲೋಕದರ್ಶನ ವರದಿ 

ರಬಕವಿ-ಬನಹಟ್ಟಿ 03 : ಸಂಗೀತವು ಭಾಷೆ, ಜಾತಿ, ಧರ್ಮದ ಎಲ್ಲೆಗಳನ್ನು ಮೀರಿ ಮಾನವೀಯ ಮೌಲ್ಯಗಳನ್ನು ಮೂಲದಲ್ಲೇ ಬೆಸೆಯುವ ವಿಶ್ವಭಾಷೆಯಾಗಿದ್ದು, ಭಾರತೀಯ ಸಂಸ್ಕೃತಿಯ ಜೀವಾಳವಾಗಿದೆ ಎಂದು ಖ್ಯಾತ ಸಂಗೀತಗಾರ ಸಿದ್ದರಾಜ ಪೂಜಾರಿ ಹೇಳಿದರು.  ಬನಹಟ್ಟಿಯ ಈಶ್ವರಲಿಂಗ ಮೈದಾನದಲ್ಲಿ ಆರ್‌.ಕೆ. ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ‘ಸಂಗೀತ ಸುಧೆ' ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಕರೋಕೆ ಸಂಸ್ಕೃತಿಯ ಅತಿಯಾದ ಬಳಕೆಯಿಂದ ಮೂಲಭೂತ ಸಂಗೀತ ಸಂಸ್ಕೃತಿಗೆ ಧಕ್ಕೆಯಾಗುತ್ತಿದೆ. ಕಲಾವಿದರು ಸ್ವರಶುದ್ಧಿ, ಲಯಬದ್ಧತೆ ಹಾಗೂ ನೈಜ ಗಾಯನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದರು. 

ನಿರಾಕಾರ ಪರಮಾತ್ಮನನ್ನು ಸ್ವರಗಳ ಮೂಲಕ ಆಕಾರಗೊಳಿಸುವ ದಿವ್ಯ ಸಾಧನೆಯೇ ಸಂಗೀತ. ಆದ್ದರಿಂದ ಸ್ವರಗಳನ್ನು ಶಾಸ್ತ್ರೀಯವಾಗಿ, ಶುದ್ಧವಾಗಿ ಬಳಸುವುದು ಪ್ರತಿಯೊಬ್ಬ ಸಂಗೀತ ಸಾಧಕನ ಕರ್ತವ್ಯವಾಗಿದೆ. ಸಂಗೀತ ಕ್ಷೇತ್ರದಲ್ಲಿ ಗುರುಭಕ್ತಿ, ಶಿಸ್ತು ಮತ್ತು ನಿರಂತರ ಸಾಧನೆಯೇ ಯಶಸ್ಸಿನ ಮೂಲಮಂತ್ರವಾಗಿದೆ. ಕಲೆಗಳು ಜೀವಂತವಾಗಿಲ್ಲದ ಊರು ಅಥವಾ ಸಮಾಜ ಎಂದಿಗೂ ಸಾಂಸ್ಕೃತಿಕವಾಗಿ ಸಮೃದ್ಧವಾಗುವುದಿಲ್ಲ. ಭಾರತದಲ್ಲಿ ಸಂಗೀತ ಇಂದಿಗೂ ಜೀವಂತವಾಗಿರುವುದು ನಮ್ಮ ಸಂಸ್ಕೃತಿಯ ವೈಭವಕ್ಕೆ ಸಾಕ್ಷಿಯಾಗಿದೆ.  ಭಾರತೀಯರ ಅಭಿರುಚಿ, ಸತ್ವ ಹಾಗೂ ಆಧ್ಯಾತ್ಮಿಕ ಚಿಂತನೆ ಸಂಗೀತದಲ್ಲಿ ಅಡಕವಾಗಿದೆಯೆಂದು ಅಭಿಪ್ರಾಯಪಟ್ಟರು.

ಯುವ ಸಂಗೀತಗಾರ ಭಾವುರಾಜ ತುಬಚಿ ಮಾತನಾಡಿ, ಸಂಗೀತವು ಮಾನವನ ಮನಸ್ಸನ್ನು ಪರಿಶುದ್ಧಗೊಳಿಸಿ ಸಮಾಜದಲ್ಲಿ ಸಾಮರಸ್ಯ ಮತ್ತು ಸಂಸ್ಕಾರ ಬೆಳೆಸುವ ಶಕ್ತಿಯಾಗಿದೆ. ಇಂತಹ ಸಂಗೀತ ಕಾರ್ಯಕ್ರಮಗಳು ಭಾರತೀಯ ಸಂಸ್ಕೃತಿಯ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆಯೆಂದರು.  ಜಿ.ಆರ್‌. ಕುಲಕರ್ಣಿ, ಶಿವಾನಂದ ಮಹಾರಾಜರು, ಪ್ರಕಾಶ ರಾವಳ, ಪ್ರಕಾಶ ಕೋಪರ್ಡೆ, ರಾಜಶೇಖರ ಕರಲಟ್ಟಿ, ಶಂಕರ ಜಾಲಿಗಿಡದ, ಲಕ್ಷ್ಮೀ ಪರಮೇಶ್ವರಿ, ಮಲ್ಲು ತುಂಗಳ ವೇದಿಕೆ ಮೇಲಿದ್ದರು. ಭಾವುರಾಜ ತುಬಚಿ ತಂಡದಿಂದ ಎರಡು ಗಂಟೆಗಳಷ್ಟು ಸುಗಮ ಸಂಗೀತ ಪ್ರೇಕ್ಷಕರ ಮನಗೆದ್ದಿತು.