ಕಾಂಗ್ರೆಸ್ ಜನಸಂಪರ್ಕ ಅಭಿಯಾನದಲ್ಲಿ ಮೃಣಾಲ್ ಹೆಬ್ಬಾಳಕರ್ ಭಾಗಿ

ಕಾಂಗ್ರೆಸ್ ಜನಸಂಪರ್ಕ ಅಭಿಯಾನದಲ್ಲಿ ಮೃಣಾಲ್ ಹೆಬ್ಬಾಳಕರ್ ಭಾಗಿ  Mrunal Hebbalkar participates in the Congress public outreach campaign.


ಪಣಜಿ 21: ಗೋವಾ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ‘ಗೋಯ್ ರಖೋನ್ನ ಯಾತ್ರೆ’ಯ ಪೂರ್ವಭಾವಿ ಸಭೆಯಲ್ಲಿ ಎಐಸಿಸಿಯಿಂದ ಗೋವಾ ವಿಧಾನಸಭಾ ಚುನಾವಣೆಯ ಮಾಧ್ಯಮ ಮತ್ತು ಪ್ರಚಾರ ಚಟುವಟಿಕೆಗಳ ಸಮನ್ವಯಕ್ಕಾಗಿ ನೇಮಕಗೊಂಡಿರುವ ಮೃಣಾಲ್ ಹೆಬ್ಬಾಳಕರ್ ಭಾಗವಹಿಸಿದರು. ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿ ಆಯೋಜಿಸಿರುವ 27 ದಿನಗಳ ಜನಸಂಪರ್ಕ ಯಾತ್ರೆ ಸೆ.22ರಿಂದ ಅ.18ರವರೆಗೆ ನಡೆಯಲಿದ್ದು, ರಾಜ್ಯದ ಎಲ್ಲ 40 ವಿಧಾನಸಭಾ ಕ್ಷೇತ್ರಗಳ ಮೂಲಕ 355ಕ್ಕೂ ಹೆಚ್ಚು ಕಿ.ಮೀ. ಸಂಚರಿಸಲಿದೆ. ಗೋವಾದ ಅಸ್ಮಿತೆ, ಭೂಮಿ, ಪರಿಸರ, ನೈಸರ್ಗಿಕ ಸಂಪತ್ತು ಹಾಗೂ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಯ ಜತೆಗೆ ಜನರ ಸಮಸ್ಯೆಗಳನ್ನು ನೇರವಾಗಿ ಆಲಿಸುವುದು ಯಾತ್ರೆಯ ಉದ್ದೇಶವಾಗಿದೆ ಎಂದು ಕಾಂಗ್ರೆಸ್ ತಿಳಿಸಿದೆ.

ಭೂಮಿ ಪರಿವರ್ತನೆ, ಪರಿಸರ ಸಂರಕ್ಷಣೆ, ನಿರುದ್ಯೋಗ, ಕಾನೂನು ಸುವ್ಯವಸ್ಥೆ ಹಾಗೂ ಮಹಿಳಾ ಸುರಕ್ಷತೆ ಸೇರಿದಂತೆ ಹಲವು ವಿಷಯಗಳು ಯಾತ್ರೆಯಲ್ಲಿ ಚರ್ಚೆಗೆ ಬರಲಿವೆ. ಸಭೆಯಲ್ಲಿ ಯಾತ್ರೆಯ ಸಿದ್ಧತೆ, ವಿವಿಧ ಹಂತಗಳ ಕಾರ್ಯಕ್ರಮಗಳ ಸಮನ್ವಯ ಹಾಗೂ ಮಾಧ್ಯಮ ಮತ್ತು ಪ್ರಚಾರ ಚಟುವಟಿಕೆಗಳ ಕುರಿತು ಚರ್ಚಿಸಲಾಯಿತು. ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಯಾತ್ರೆಯನ್ನು ಪರಿಣಾಮಕಾರಿಯಾಗಿ ತಲುಪಿಸುವುದು ಮತ್ತು ಸ್ಥಳೀಯ ಸಮಸ್ಯೆಗಳ ಕುರಿತು ಜನರೊಂದಿಗೆ ನೇರ ಸಂವಾದಕ್ಕೆ ಅವಕಾಶ ಕಲ್ಪಿಸುವ ಬಗ್ಗೆ ಸಭೆಯಲ್ಲಿ ಸಮಾಲೋಚನೆ ನಡೆಯಿತು. ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗೀರೀಶ್ ಚೋಡಣ್ಕರ್, ಕಾರ್ಯಾಧ್ಯಕ್ಷ ಸುನಿಲ್ ಕವತಾಂಕರ, ರಾಷ್ಟ್ರೀಯ ಮಾಧ್ಯಮ ಸಂಯೋಜಕ ಮ್ಯಾಥ್ಯೂ ಆಂಥನಿ, ಸಂಯೋಜಕ ನಿಶಾಂತ್ ಆನಂದ್ ಹಾಗೂ ಕಾಂಗ್ರೆಸ್ ಮುಖಂಡ ವರದ್ ಮರ್ಡೋಲ್ಕರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಗೋವಾ ಕಾಂಗ್ರೆಸ್ ಮಾಧ್ಯಮ ಕಾರ್ಯತಂತ್ರದಲ್ಲಿ ಮೃಣಾಲ್ಗೆ ಜವಾಬ್ದಾರಿ ಗೋವಾ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಎಐಸಿಸಿ ಸೆ.14ರಂದು ಮಾಧ್ಯಮ ಹಾಗೂ ಪ್ರಚಾರ ಚಟುವಟಿಕೆಗಳ ಸಮನ್ವಯಕ್ಕಾಗಿ ಮೃಣಾಲ್ ಹೆಬ್ಬಾಳಕರ್, ಮ್ಯಾಥ್ಯೂ ಆಂಥನಿ, ನಿಶಾಂತ್ ಆನಂದ್ ಹಾಗೂ ಅಲಿ ಮೆಹ್ದಿ ಅವರನ್ನು ಸಂಯೋಜಕರಾಗಿ ನೇಮಕ ಮಾಡಿತ್ತು. ಈ ಜವಾಬ್ದಾರಿಯ ಭಾಗವಾಗಿ ಮೃಣಾಲ್ ಹೆಬ್ಬಾಳಕರ್ ಅವರು ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿಯೊಂದಿಗೆ ಸಮನ್ವಯ ಸಾಧಿಸಿ ಮಾಧ್ಯಮ ಮತ್ತು ಪ್ರಚಾರ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಸೆ.22ರಂದು ಪಣಜಿಯ ಅಂಬೇಡ್ಕರ್ ಪಾರ್ಕ್ನಿಂದ ಯಾತ್ರೆ ಆರಂಭವಾಗಲಿದ್ದು, 27 ದಿನಗಳಲ್ಲಿ ರಾಜ್ಯದ ಎಲ್ಲ 40 ವಿಧಾನಸಭಾ ಕ್ಷೇತ್ರಗಳನ್ನು ತಲುಪುವ ಕಾರ್ಯಕ್ರಮ ರೂಪಿಸಲಾಗಿದೆ.