ವಿಜಯಪುರದ ಐತಿಹಾಸಿಕ ತಾಣಗಳಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚಿಸಲು ಕ್ರಮ

ವಿಜಯಪುರದ ಐತಿಹಾಸಿಕ ತಾಣಗಳಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚಿಸಲು ಕ್ರಮ  Measures to increase the number of tourists visiting historical sites in Vijayapura

ಲೋಕದರ್ಶನ ವರದಿ 

ವಿಜಯಪುರ 26: ವಿಜಯಪುರದ ಐತಿಹಾಸಿಕ ಪ್ರವಾಸಿ ತಾಣಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುವುದರಿಂದ ಜಿಲ್ಲೆಯ ಆರ್ಥಿಕತೆಗೆ ಬಲ ಬರಲಿದ್ದು, ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಜಿಲ್ಲಾಧಿಕಾರಿ ಡಾ. ಆನಂದ ಕೆ. ಹಿತೇಂದ್ರ ಹೇಳಿದರು.  

ವಿಶ್ವ ಪ್ರವಾಸೋದ್ಯಮ ದಿನಾಚರಣೆ-2026ರ ಅಂಗವಾಗಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಪುರಾತತ್ವ, ವಸ್ತುಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ, ಕೆಟಿಪಿಸಿ ಕೂಡಗಿ, ಹೋಟೆಲ್ ಅಸೋಸಿಯೇಷನ್ ವಿಜಯಪುರ ಹಾಗೂ ಬಿಎಲ್ಡಿಇ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ನಗರದ ಐತಿಹಾಸಿಕ ಆನಂದ ಮಹಲ್ ಸ್ಮಾರಕದ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  

ನಗರದ ಐತಿಹಾಸಿಕ ಸ್ಮಾರಕಗಳಿಂದ ವಿಜಯಪುರ ವಿಶ್ವಪ್ರಸಿದ್ಧವಾಗಿದೆ. ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ಪ್ರವಾಸಿ ತಾಣಗಳ ಅಭಿವೃದ್ಧಿ, ಮೂಲಸೌಕರ್ಯ ಕಲ್ಪನೆ ಹಾಗೂ ಪ್ರವಾಸೋದ್ಯಮ ಉತ್ತೇಜನಕ್ಕೆ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.  

ಕೆಟಿಪಿಸಿ ಕೂಡಗಿ ಹಾಗೂ ಕ್ಯಾನ್ವಾಸ್ ಆರ್ಟ್ಸ ಫೌಂಡೇಶನ್ ಸಹಯೋಗದಲ್ಲಿ ಐತಿಹಾಸಿಕ ಇಬ್ರಾಹಿಂ ರೋಜಾ ಸ್ಮಾರಕದ ಆವರಣದಲ್ಲಿ ಹಿರಿಯ ಹಾಗೂ ಉದಯೋನ್ಮುಖ ಕಲಾವಿದರಿಗಾಗಿ ಚಿತ್ರಕಲಾ ಶಿಬಿರ ಆಯೋಜಿಸಲಾಗಿತ್ತು. ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು ಸ್ವತಃ ಕಲಾಕೃತಿ ಬಿಡಿಸುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.  

ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಪ್ರವಾಸಿ ಮಾರ್ಗದರ್ಶಕರು, ಕಾಲೇಜು ವಿದ್ಯಾರ್ಥಿನಿಯರು, ಕಲಾವಿದರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಚಿತ್ರಕಲಾ ಶಿಬಿರದಲ್ಲಿ 25ಕ್ಕೂ ಹೆಚ್ಚು ಕಲಾವಿದರು ಪಾಲ್ಗೊಂಡಿದ್ದರು.