ತಾಲೂಕಾಡಳಿತದಿಂದ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ
ತಾಳಿಕೋಟಿ 11: ಮಹಾನ್ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮಳ 603ನೇ ಜಯಂತಿಯನ್ನು ತಾಲೂಕ ಆಡಳಿತದ ವತಿಯಿಂದ ಅರ್ಥ ಪೂರ್ಣವಾಗಿ ಆಚರಿಸಲಾಯಿತು.
ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ಶನಿವಾರ ನಡೆದ ಜಯಂತಿ ಕಾರ್ಯಕ್ರಮದಲ್ಲಿ ತಹಸಿಲ್ದಾರ್ ಡಾ.ವಿನಯಾ ಹೂಗಾರ ಅವರು ಹೇಮರೆಡ್ಡಿ ಮಲ್ಲಮ್ಮಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಶಿಕ್ಷಕ ವೀರೇಶ ಕವಡಿಮಟ್ಟಿ ಮಾತನಾಡಿದ ಅವರು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಎಲ್ಲ ರೀತಿಯ ಕೌಟುಂಬಿಕ ಸಮಸ್ಯೆಗಳನ್ನು ಮೆಟ್ಟಿನಿಂತು ತನ್ನ ನಿಷ್ ಕಳಂಕ ಭಕ್ತಿಯಿಂದ ಶ್ರೀಶೈಲ ಮಲ್ಲಿಕಾರ್ಜುನನ್ನು ಒಲಿಸಿಕೊಂಡು ಅವನ ಸಂಪ್ರೀತಿಗೆ ಪಾತ್ರಳಾಗಿ ಸಾವಿರಾರು ನೊಂದ ಮಹಿಳೆಯರ ಬಾಳಿಗೆ ಬೆಳಕಾದಳು ಅವಳು ಕೇವಲ ರೆಡ್ಡಿ ಜನಾಂಗಕ್ಕೆ ಮಾತ್ರವಲ್ಲ ಇಡೀ ಮನುಕುಲಕ್ಕೆ ಮಾದರಿಯಾಗಿದ್ದಾಳೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಶೀಲ್ದಾರ್ ಡಾ.ವಿನಯಾ ಹೂಗಾರ ಅವರು ಮಾತನಾಡಿ ಕೇವಲ ಮಹಾತ್ಮರ ಜಯಂತಿಗಳನ್ನು ಆಚರಿಸಿದರೆ ಸಾಲದು ಅವರು ಕೊಟ್ಟು ಹೋದ ಆದರ್ಶಗಳನ್ನು ನಮ್ಮ ಜೀವನಕ್ಕೆ ಅಳವಡಿಸಿಕೊಳ್ಳುವ ಅಗತ್ಯ ಇದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ, ರೆಡ್ಡಿ ಸಮಾಜದ ಗಣ್ಯರಾದ ಬಿ.ಎಸ್. ಪಾಟೀಲ ಯಾಳಗಿ, ಎಂ.ಜಿ. ಪಾಟೀಲ, ಎಚ್.ಎಸ್.ಪಾಟೀಲ, ಎಸ್. ಎಸ್.ದೇಸಾಯಿ, ಬಿ.ಎನ್.ಹಿಪ್ಪರಗಿ, ಸಿದ್ದನಗೌಡ ಪಾಟೀಲ ನಾವದಗಿ, ಪ್ರಭುಗೌಡ ಮದರಕಲ್ಲ, ಬಿ. ಆರ್. ಪೊಲೀಸ ಪಾಟೀಲ, ರವಿ ಪಾಟೀಲ, ಸಂಗನಗೌಡ ಅಸ್ಕಿ, ಪ್ರವೀಣ ರೆಡ್ಡಿ, ಚಿನ್ನಪ್ಪ ಮಾಳಿ, ಬಿ. ಎಸ್. ಇಸಾಂಪೂರ, ಶಿರಸ್ತೆದಾರ ಜೆ.ಆರ್. ಜೈನಾಪೂರ ಮತ್ತಿತರರು ಇದ್ದರು.